ಮೈಸೂರು: ಅಪ್ರಾಪ್ತ ಯುವಕನಿಗೆ ಬೈಕ್ ಚಲಾಯಿಸಲು ಕೊಟ್ಟಿದ್ದಕ್ಕೆ ಬೈಕ್ ಮಾಲೀಕರಿಗೆ 27 ಸಾವಿರ ರೂ. ದಂಡ ವಿಧಿಸಿರುವ ಕೋರ್ಟ್ ಒಂದು ವರ್ಷದವರೆಗೆ ಅವರ ಆರ್.ಸಿ.ಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಬೈಕ್ ಚಾಲನೆ ಮಾಡಿದ ಅಪ್ರಾಪ್ತನಿಗೆ 25 ವರ್ಷ ತುಂಬುವವರೆಗೂ ವಾಹನ ಚಾಲನೆ ಪರವಾನಗಿ ನೀಡದಂತೆ ಕೋರ್ಟ್ ಆದೇಶಿಸಿದೆ.
ಟಿ.ನರಸೀಪುರದ ಜೆಎಫ್‌ಎಂಸಿ ನ್ಯಾಯಾಲಯ ಗುರುವಾರ ಇಂಥದ್ದೊಂದು ಅಪರೂಪದ ತೀರ್ಪು ನೀಡಿದೆ. ಇತ್ತೀಚೆಗೆ ಟಿ.ನರಸೀಪುರ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಬಾಲಕನೊಬ್ಬ ದ್ವಿಚಕ್ರ ವಾಹನ ಓಡಿಸುತ್ತಿರುವುದು ಪತ್ತೆಯಾಗಿದ್ದು, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಟಿ.ನರಸೀಪುರದ ನ್ಯಾಯಾಲಯವು, ಬಾಲಕನಿಗೆ ವಾಹನ ನೀಡಿದ ವಾಹನ ಮಾಲಿಕ ಟಿ.ನರಸೀಪುರ ತಾಲೂಕು ತ್ರಿವೇಣಿನಗರ ನಿವಾಸಿ ಮಹೇಶ್ ಎಂಬವರಿಗೆ 27 ಸಾವಿರ ರು. ದಂಡ ವಿಧಿಸಿದ್ದಲ್ಲದೆ, ಒಂದು ವರ್ಷ ವಾಹನದ ಆರ್.ಸಿ. ಅಮಾನತಿನಲ್ಲಿರಿಸು ವಂತೆ ಆದೇಶಿಸಿದೆ. ಜತೆಗೆ, ಬಾಲಕನಿಗೆ 25 ವರ್ಷದವರೆಗೆ ವಾಹನ ಚಾಲನಾ ಪರವಾನಗಿ ನೀಡದಂತೆ ತೀರ್ಪು ನೀಡಿದೆ.