ಸುದ್ದಿ

SSLC ಫಲಿತಾಂಶ ಕುಸಿತ: ಮೊರಾರ್ಜಿ, ಮೌಲಾನಾ ಆಜಾದ್ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಎಚ್ಚರಿಕೆ

Share It

ಬೆಂಗಳೂರು: ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಒಟ್ಟು ಸರಾಸರಿ ಫಲಿತಾಂಶಕ್ಕಿಂತ (ಶೇ 73.40) ಕಡಿಮೆ ಫಲಿತಾಂಶ ಪಡೆದ ಮೊರಾರ್ಜಿ ದೇಸಾಯಿ ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೋಕಾಸ್‌ ನೋಟಿಸ್‌ ನೀಡಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯ, ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ.

40ಕ್ಕೂ ಹೆಚ್ಚು ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ 6 ಮೊರಾರ್ಜಿ ದೇಸಾಯಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ನ. 26ರಂದು ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿಯೂ ಆಗಿರುವ ನಿರ್ದೇಶಕ ಜೀಲಾನಿ ಎಚ್. ಮೊಕಾಶಿ ನೋಟಿಸ್‌ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಜೀಲಾನಿ ಎಚ್‌. ಮೊಕಾಶಿ, ‘ಮೌಲಾನಾ ಆಜಾದ್‌ ಶಾಲೆಗಳ ಪೈಕಿ ಕೆಲವು ಶಾಲೆಗಳಲ್ಲಿ ಶೇ 5% ಇನ್ನೂ ಕೆಲವು ಶಾಲೆಗಳಲ್ಲಿ ಶೇ 10% ಫಲಿತಾಂಶ ದಾಖಲಾಗಿದೆ. ಫಲಿತಾಂಶ ಈ ಮಟ್ಟಕ್ಕೆ ಕುಸಿದರೆ ಮುಖ್ಯ ಶಿಕ್ಷಕರ ಪಾತ್ರವೇನು? ಅವರಿಗೆ ಹೊಣೆಗಾರಿಕೆ ಇಲ್ಲವೇ? ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಬಾರದೇ’ ಎಂದು ಪ್ರಶ್ನಿಸಿದರು.

‘ಮೂಲಸೌಲಭ್ಯದ ಕೊರತೆಯೇ ಕಳಪೆ ಫಲಿತಾಂಶಕ್ಕೆ ಕಾರಣ ಎನ್ನುವುದು ಎಷ್ಟು ಸರಿ? ಶೇ 100% ಫಲಿತಾಂಶ ದಾಖಲಾದ ಮೌಲಾನಾ ಆಜಾದ್ ಶಾಲೆಗಳೂ ಇವೆ. ನಮ್ಮ ಅಧೀನದಲ್ಲಿರುವ ಕೆಲವು ವಸತಿ ಶಾಲೆಗಳಲ್ಲಿ ಶೇ 9, ಸಿಬಿಎಸ್‌ಇ ಶಾಲೆಗಳಲ್ಲಿ ಶೇ 100, ದ್ವಿತೀಯ ಪಿಯುಸಿ ಇರುವ ಶಾಲೆಗಳಲ್ಲಿ ಶೇ 98.50ರಷ್ಟು ಫಲಿತಾಂಶ ದಾಖಲಾಗಿದೆ. ಉತ್ತಮ ಫಲಿತಾಂಶ ದಾಖಲಾದ ಶಾಲೆಗಳ ಮುಖ್ಯ ಶಿಕ್ಷಕರನ್ನು ಇತ್ತೀಚೆಗೆ ಸನ್ಮಾನಿಸಿದ್ದೇವೆ’ ಎಂದೂ ಹೇಳಿದರು.


Share It

You cannot copy content of this page