ಬೆಂಗಳೂರು: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಯಲ್ಲಿ ಬಿಬಿಎಂಪಿ ದಕ್ಷಿಣ ವಲಯದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿ ಉಲ್ಲಾಸ್ ಬಿ ಗಂಗನಹಳ್ಳಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ,1.5 ಲಕ್ಷ ದಂಡ ವಿಧಿಸಿದೆ.
ಮಸಾಲೆ ಪುಡಿ ತಯಾರಿಕೆಗೆ ಲೈಸೆನ್ಸ್ ನೀಡಲು 5 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ತನಿಖೆ ನಡೆಸಿದ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಉಲ್ಲಾಸ್ ಅವರಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ ವಿನಾಯಿತಿ ಕೋರಿಕೆಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಾಲಯ,ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆಯಲ್ಲಿ ಮೇಲಿನಿಂದ ಕೆಳಗಿನವರೆಗೆ ಭ್ರಷ್ಟಾಚಾರ ಸಾಮಾನ್ಯವಾಗಿದೆ.ಸಾರ್ವಜನಿಕ ಸೇವಕರು ನೈತಿಕತೆಯ ಭಯವಿಲ್ಲದೆ ನಿರ್ಲಜ್ಜವಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುಲು ತಮ್ಮ ಹುದ್ದೆಯನ್ನು ಪರವಾನಗಿಯಾಗಿ ಪರಿವರ್ತಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೂರುದಾರ ಮಹೇಶ್ ಎಂಬುವರು ಮಸಾಲೆ ಪುಡಿ ತಯಾರಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಮೊಬೈಲ್ ಗೆ ಕರೆ ಮಾಡಿದಾಗ ಉಲ್ಲಾಸ್ ಬಿ ಗಂಗನಹಳ್ಳಿ ಅವರು ಬಿಟಿಎಂ ಲೇಔಟ್ ನ ಗಂಗೋತ್ರಿ ಸರ್ಕಲ್ ಗೆ 2018ರ ಡಿಸೆಂಬರ್ 11ರಂದು ಬರುವಂತೆ ಹೇಳಿದ್ದಾರೆ.ಈ ವೇಳೆ ಲೈಸನ್ಸ್ ನೀಡಲು 10 ಸಾವಿರ ರು ಹಣವನ್ನು ಲಂಚದ ರೂಪದಲ್ಲಿ ನೀಡುವಂತೆ ಕೇಳಿದ್ದರು. ಮುಂಗಡ 5 ಸಾವಿರ ಲಂಚದ ಹಣ ಪಡೆದು ಸಿಕ್ಕಿಬಿದ್ದಿದ್ದ ಅಧಿಕಾರಿ ಉಲ್ಲಾಸ್ ಅವರಿಗೆ ಕೋಟ್೯ ಶಿಕ್ಷೆ ವಿಧಿಸಿದೆ