ಬೆಂಗಳೂರು: ಅಕ್ರಮ, ಆದಾಯ ಮೀರಿದ ಆಸ್ತಿಗಳಿಕೆ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆ,ಕಚೇರಿ,ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಸುಮಾರು ₹48.55 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಪತ್ತೆ ಮಾಡಿದ್ದಾರೆ.
ಈ ದಾಳಿ ಬಗ್ಗೆ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಆರೋಪಿತ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.
ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಎಂ.ಲೋಕೇಶ್ ಬಾಬು, ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕಂದಾಯ ನಿರೀಕ್ಷಕ ಎಸ್.ಜಿ.ಸುರೇಶ್, ಬಿಬಿಎಂಪಿ ವಿದ್ಯಾರಣ್ಯಪುರ ಉಪವಿಭಾಗದ ತೆರಿಗೆ ನಿರೀಕ್ಷಕ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ಸುನೀಲ್ ಕುಮಾರ್, ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಕೆ.ಏಕೇಶ್ ಬಾಬು, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಸಶಸ್ತ್ರ ವಿಭಾಗದ ಡಿವೈಎಸ್ಪಿ ನಂಜುಂಡಯ್ಯ, ಗದಗ ಜಿಲ್ಲೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಸ್ ಡಿಎ ಲಕ್ಷ್ಮಣ್ ಕೊನೆರಪ್ಪ ಕರಣಿ,ಕಲಬುರಗಿ ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ರಾಮಪ್ಪ ಪಾಂಡು ಜಾಧವ್,ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ರಮೇಶ್.ಬಿ.ಅಗಡಿ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್ ಇವರುಗಳ ಮನೆ,ಕಚೇರಿ,ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.