ಚಾಮರಾಜನಗರ: ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಕಟ್ಟೆಗಡಿ ಯಜಮಾನರು ಉಪ್ಪಾರ ಸಮಾಜಕ್ಕೆ ಸೇರಿದ ಸಿದ್ದರಾಜು ಎಂಬುವರ ಕುಟುಂಬಕ್ಕೆ ₹65 ಸಾವಿರ ರೂ.ದಂಡ ಹಾಕಿ, ಒಂದು ವರ್ಷದಿಂದ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನುಷ ಘಟನೆ ತಾಲ್ಲೂಕಿನ ಲಿಂಗರಾಜಪುರದಲ್ಲಿ ನಡೆದಿದೆ.
ಈ ಪ್ರಕರಣ ಸಂಬಂಧ ಸಿದ್ದರಾಜು ಮಾತನಾಡಿ, ‘ನನ್ನ ಮಗಳು ಅಂತರ್ಜಾತಿ ವಿವಾಹವಾಗಿರುವುದು ತಪ್ಪೆಂದು ಊರಿನ ಯಜಮಾನರು, ಗಡಿಕಟ್ಟೆ ಯಜಮಾನರು ಬಲವಂತವಾಗಿ ₹65 ಸಾವಿರ ದಂಡ ಕಟ್ಟಿಸಿಕೊಂಡಿದ್ದಾರೆ. ಮಗಳನ್ನು ಗ್ರಾಮಕ್ಕೆ ಕರೆತಂದರೆ ಮತ್ತೆ ₹1.20 ಲಕ್ಷ ದಂಡದ ಜೊತೆಗೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದರು.
ಅಂತರ್ಜಾತಿ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿಲ್ಲವೇ? ದಂಡ ವಿಧಿಸಲು, ನ್ಯಾಯ ತೀರ್ಮಾನಿಸಲು ನ್ಯಾಯಾಲಯಗಳು ಇಲ್ಲವೇ? ಬಹಿಷ್ಕಾರ ಭಯದಿಂದ, ಮಗಳನ್ನು ನೋಡಲಾಗದೆ, ಮಾತನಾಡಲಾಗದೆ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ನೊಂದವರಿಗೆ ನ್ಯಾಯ ಕೊಡಿಸಿಲ್ಲ. ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಲಾಗುವುದು. ಗೃಹ ಸಚಿವರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ಪ್ರಜಾ ಪರಿವರ್ತನ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಮುತ್ತಪ್ಪ ತಿಳಿಸಿದರು.