ಮಂಗಳೂರು: ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು ₹4 ಲಕ್ಷ ಲಂಚ ಪಡೆದ ಆರೋಪದ ಮೇಲೆ ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪದ್ಮಾವತಿ ಎಂಬುವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಅವರ ಮೊಮ್ಮಗ ಕಳೆದ ವರ್ಷ ಮೂಲ್ಕಿ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮೂಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಅವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಅರ್ಜಿಯನ್ನು ಬಾಕಿ ಇರಿಸಿಕೊಂಡಿದ್ದರು. ಅರ್ಜಿದಾರರು 2024ರ ಡಿಸೆಂಬರ್ 9ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ವಿಚಾರಿಸಿದ್ದರು.
ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರುಗಳನ್ನು ಸೇರ್ಪಡೆ ಮಾಡಲು ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಅವರು ₹ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪವಿದ್ದು, ಈ ಸಂಬಂಧ ಅರ್ಜಿದಾರರು ಇಲ್ಲಿನ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ದಿನೇಶ್ ಅವರು ಸುರತ್ಕಲ್ ಜಂಕ್ಷನ್ ಬಳಿ ಅರ್ಜಿದಾರರಿಂದ ₹4 ಲಕ್ಷ ಲಂಚದ ಹಣವನ್ನು ಪಡೆಯುವಾಗ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.