ಸುದ್ದಿ

ಧರ್ಮಗಳು ಅಸಹನೆ, ಅಸಮಾನತೆಯನ್ನು ಬಿತ್ತುವ ಸಾಧನಗಳಾಗಿ ಬಿಟ್ಟಿವೆ: ಗೊರುಚ

Share It

12ನೇ ಶತಮಾನದ ‘ಶರಣರು ಒಬ್ಬರ ಮನವ ನೋಯಿಸದವನೆ, ಒಬ್ಬರ ಮನವ ಘಾತವ ಮಾಡದವನೆ ಪರಮ ಪಾವನ’ ಎಂದಿದ್ದಾರೆ. ಇಂದು ಈ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.”

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಶುಕ್ರವಾರ ಆರಂಭವಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಿಂದ ಸಾವಿರಾರು ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು.

ಸಮ್ಮೇಳನವನ್ನು ಉದ್ದೇಶಿಸಿ ಸುದೀರ್ಘವಾಗಿ ಭಾಷಣ ಮಾಡಿದ ಗೂ.ರು. ಚನ್ನಬಸಪ್ಪ ಅವರು ‘ಧರ್ಮ, ಮಹಿಳಾ ಸಮಾನತೆ, ಲಿಂಗ ಸಮಾನತೆ,ಕೋಮು ಸೌಹಾರ್ದ ತೆ, ಮನುಷ್ಯ ಧರ್ಮದ ಬಗ್ಗೆ ಸುಧೀರ್ಘವಾಗಿ ಮಾತನಾಡಿ ಗಮನ ಸೆಳೆದರು.

ಭಾರತ ಬಹುಧರ್ಮಗಳ ನೆಲೆ, ತುಂಬ ವಿಷಾದದ ಸಂಗತಿಯೆಂದರೆ, ಜನರನ್ನು, ಸಮಾಜವನ್ನು, ಜನಸಮೂಹವನ್ನು ಕಾಯಬೇಕಾಗಿದ್ದ, ಒಂದುಗೂಡಿಸಬೇಕಿದ್ದ ಧರ್ಮಗಳು ಅಸಹನೆಯನ್ನು, ಅಸಮಾನತೆ ಯನ್ನು ಬಿತ್ತುವ ಸಾಧನಗಳಾಗಿ ಬಿಟ್ಟಿವೆ. ಧರ್ಮದ, ಧಾರ್ಮಿಕ ಸಂಸ್ಥೆಗಳ ದುರುಪಯೋಗವಾಗುತ್ತಿದೆ’ ಎಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

12ನೇ ಶತಮಾನದ ‘ಶರಣರು ಒಬ್ಬರ ಮನವ ನೋಯಿಸದವನೆ, ಒಬ್ಬರ ಮನವ ಘಾತವ ಮಾಡದವನೆ ಪರಮ ಪಾವನ’ ಎಂದಿದ್ದಾರೆ. ಇಂದು ಈ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಬ್ಬ- ಹರಿದಿನಗಳು, ಉತ್ಸವ- ಆರಾಧನೆಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಬದಲು ಸಮಾಜವನ್ನು ಒಡೆಯುವ ಆಯುಧ ಗಳಾಗುತ್ತಿವೆ. ದಯೆಯ ಬದಲಾಗಿ ಹಿಂಸೆಯನ್ನು ವಿಜೃಂಭಿಸಲಾಗುತ್ತಿದೆ. ದುಡಿಮೆಗೆ, ದುಡಿಮೆಗಾರರಿಗೆ, ಕಷ್ಟಸಹಿಷ್ಣುಗಳಿಗೆ ದೊರೆಯಬೇಕಾದಷ್ಟು ಮನ್ನಣೆ, ಪ್ರೋತ್ಸಾಹ, ನೆರವು ದೊರೆಯುತ್ತಿಲ್ಲ’ ಎಂದು ವಿಷಾದಿಸಿದರು.

ಮಹಿಳಾ ಪ್ರಾತಿನಿಧ್ಯ: ‘ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಏನನ್ನೂ ಹೇಳದಿರುವುದೇ ಲೇಸು’ ಎಂದು ಬೇಸರ ವ್ಯಕ್ತಪಡಿಸಿದ ಗೊರುಚ ‘ಹೆಣ್ಣು ಮಕ್ಕಳು ಹುಟ್ಟುವುದೇ ದುರ್ಲಭ; ಹುಟ್ಟಿದ ಮೇಲೆ ಬದುಕುಳಿಯುವುದು, ಉಳಿದರೆ ಬೆಳೆಯುವುದು, ಬೆಳೆದರೆ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

12ನೇ ಶತಮಾನದ ವಚನ ಚಳವಳಿಯಲ್ಲಿ. ಅಂದು ಈ ನೆಲದಲ್ಲಿ ಬಿತ್ತನೆಯಾದ ಲಿಂಗ ಸಮಾನತೆಯ ಮೌಲ್ಯವನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ನಾವು ಮನಗಾಣಬೇಕು’ ಎಂದು ಕರೆ ನೀಡಿದರು.

“ನಮ್ಮ ಸಮ್ಮೇಳನಗಳಲ್ಲಿ, ಸಮಾವೇಶಗಳಲ್ಲಿ ‘ಅವರಿಗೂ ಒಂದು ಸ್ಥಾನ’ ಎನ್ನುವಂತೆ ಮಹಿಳೆಯರ ವಿಷಯವನ್ನು ಚರ್ಚಿಸಲಾಗುತ್ತದೆ. ಆದರೆ ಅವರ ಹಕ್ಕುಗಳನ್ನು ಸಾಂವಿಧಾನಿಕ ನೆಲೆಯಲ್ಲಿ ನಾವು ನೀಡುವುದಕ್ಕೆ ಸಿದ್ಧವಿಲ್ಲ. ಇದಕ್ಕೆ ಅಪ್ಪಟ ನಿದರ್ಶನವೆಂದರೆ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ. ನಮಗೆ ಸ್ವಾತಂತ್ರ್ಯ ಬಂದ 77 ವರ್ಷಗಳಾದರೂ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ನೀತಿಯನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಿಲ್ಲ’ ಎಂದು ವಿಷಾದಿಸಿದರು.

ಇನ್ನೂ ಸಾಹಿತ್ಯ ಸಮ್ಮೇಳನದ ಮೊದಲ ದಿನ ಹಲವು ಅರ್ಥ ಪೂರ್ಣ ಚರ್ಚೆ, ವಿಷಯ ಗೋಷ್ಠಿಗಳಿಗೆ ಸಾಕ್ಷಿಯಾಯಿತು. ವೈವಿಧ್ಯಮಯ ಕಲಾ ಮೇಳಗಳ ಜೊತೆ ಅಧ್ಯಕ್ಷರಾದ ಗೂರುಚ ಅವರನ್ನು ಕನ್ನಡ ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಅತ್ಯಂತ ಗೌರವದಿಂದ ಕರೆತರಲಾಯಿತು. ಸಮ್ಮೇಳನದಲ್ಲಿ ಆಯೋಜಿಸಿದ್ದ ದೇಶಿಯ ಊಟ, ಉಪಹಾರಗಳನ್ನು ಕನ್ನಡಿಗರು ಸವಿದು ಖುಷಿಪಟ್ಟರು.


Share It

You cannot copy content of this page