ಕೊಡಗು: ಈಚೆಗೆ ಜಮ್ಮು ಕಾಶ್ಮೀರದ ಪೊಂಛ್ ನಲ್ಲಿ ಡಿ.27ರಂದು ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾಮದ ಸೈನಿಕ ಪಳಂಗೋಟಿ ದಿವಿನ್ (28) ಭಾನುವಾರ ರಾತ್ರಿ ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸೇನಾ ವಾಹನ ಪ್ರಪಾತಕ್ಕೆ ಬಿದ್ದಾಗ ದಿವಿನ್ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು. ನಂತರ ಶ್ರೀನಗರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿತ್ತು.ಯೋಧ ದಿವಿನ್ ತಾಯಿ ಸೇನಾ ಆಸ್ಪತ್ರೆಗೆ ತಲುಪಿದ್ದರು. ಆದರೆ, ಅವರಿಗೆ ಮಗನನ್ನು ಉಳಿಸಿಕೊಳ್ಳಲು ಆಗಲಿಲ್ಲ.
ತಂದೆ-ತಾಯಿಗೆ ಒಬ್ಬರೇ ಮಗನಾಗಿದ್ದ ದಿವಿನ್ 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಯುವತಿಯೊಂದಿಗೆ ಈಚೆಗೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಫೆಬ್ರವರಿಯಲ್ಲಿ ವಿವಾಹ ನಿಗದಿಯಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಸ್ವಗ್ರಾಮದಲ್ಲಿ ಹೊಸಮನೆಯನ್ನು ಕೂಡ ಯೋಧ ದಿವಿನ್ ಕಟ್ಟಿಸಿದ್ದರು.
ಶ್ರೀನಗರದಿಂದ ಬೆಂಗಳೂರಿಗೆ ವಿಮಾನದಲ್ಲಿ ಪಾರ್ಥಿವ ಶರೀರ ಬರಲಿದ್ದು, ಸೇನಾ ವಾಹನದ ಮೂಲಕ ಕೊಡಗಿನ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ತರಲಾಗುವುದು. ಸಿದ್ದಾಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ಬಳಿಕ ಮಾಲಂಬಿ ಗ್ರಾಮದ ದಿವಿನ್ ಪೋಷಕರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.