ನೀನು ವಿಧವೆ ಎಂದು ನಿಂದನೆ, ವರದಕ್ಷಿಣೆ ತರುವಂತೆ ನಿತ್ಯ ಹಲ್ಲೆ, ಕಿರುಕುಳ ಎಂದು ಪತ್ನಿ ಆರೋಪ; ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು; ಪ್ರಕರಣ ದಾಖಲಾದ ಬೆನ್ನಲ್ಲೆ ಕಾನ್ಸ್‌ಟೇಬಲ್ ಮನೋಜ್ ನಾಪತ್ತೆ
ಬೆಂಗಳೂರು: ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ವಿಧವೆಯನ್ನು ಪರಿಚಯ ಮಾಡಿಕೊಂಡು ಬಾಳು ಕೊಡುವುದಾಗಿ ನಂಬಿಸಿ
ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತನಗರ ಪೊಲೀಸ್ ಕ್ವಾಟ್ರಸ್ ನಿವಾಸಿ ರೇಖಾ ಎಂಬುವರು ನೀಡಿದ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಮನೋಜ್ (31) ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆ ರೇಖಾ ನೀಡಿದ ದೂರಿನ ಅನ್ವಯ, ನನ್ನ ಮೊದಲ ಪತಿ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ನೋಟಿಸ್ ನೀಡಲು ಮನೆಗೆ ಬಂದಿದ್ದ ಕಾನ್ಸ್‌ಟೇಬಲ್ ಮನೋಜ್ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ನಾನು ವಿಧವೆ ಯಾಗಿದ್ದು, 2 ಹಣ್ಣು ಮಕ್ಕಳಿರುವ ವಿಚಾರ ಮನೋಜ್‌ಗೆ ಗೊತ್ತಿತ್ತು. ಆದರು ಪರಸ್ಪರ ಒಪ್ಪಿಗೆ ಮೇರೆಗೆ 2024 ಆ.7ರಂದು ನಂಜನಗೂಡಿನಲ್ಲಿ ಮದುವೆಯಾಗಿ ನಂತರ ವೈಯಾಲಿಕಾವಲ್ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ನ.28ರಂದಿ ವಿವಾಹ ನೋಂದಣಿ ಮಾಡಿಸಿದ್ದೆವು.
ಮದುವೆಯಾದ ಕೆಲ ದಿನಗಳ ಬಳಿಕ ಪತಿ ಮನೋಜ್ ಅವರ ಸಂಬಂಧಿಕರು ನಮ್ಮ ಮನೆಗೆ ಜಗಳ ಮಾಡಿ,ನನಗೆ ಮತ್ತು ನನ್ನ ಮಕ್ಕಳಿಗೆ ಬೈದು ಹೋಗಿದ್ದರು. ಚಿಕ್ಕಪುಟ್ಟ ವಿಚಾರಕ್ಕೆಲ್ಲ ಪತಿ ಮನೋಜ್ ನೀನು ಇಬ್ಬರು ಮಕ್ಕಳಿರುವ ವಿಧವೆ, ನಾನು ಬೇರೆಯವರನ್ನು ಮದುವೆಯಾಗಿದ್ದರೆ ಸಾಕಷ್ಟು ವರದಕ್ಷಿಣೆ ಕೊಡುತ್ತಿದ್ದರು ಎಂದು ನಿಂದಿಸಿ ವರದಕ್ಷಿಣೆ ತರುವಂತೆ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು.
ಪತಿ ಮನೋಜ್ ಗೆ ಅನೈತಿಕ ಸಂಬಂಧವಿದ್ದು ಈ ಬಗ್ಗೆ ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಸಂಬಂಧಿಕರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವ ಸಂತ್ರಸ್ತೆ ರೇಖಾ ಪತಿ ಮನೋಜ್ ಹಾಗೂ ಅವರ ಸಂಬಂಧಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.