ಬೆಂಗಳೂರು: ಪಹಣಿಯಲ್ಲಿ ಭೂ ಮಾಲೀಕನ ಹೆಸರು
ಸೇರಿಸಲು ಲಂಚ ಪಡೆಯುತ್ತಿದ್ದ ಇಬ್ಬರು ಮಧ್ಯವರ್ತಿ ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಂಡಿರುವ ವಿಶೇಷ ತಹಶೀಲ್ದಾರ್‌ರೊಬ್ಬರ ಬಂಧನಕ್ಕೆ ಕಾರ್ಯಚರಣೆ ಕೈಗೊಂಡಿದ್ದಾರೆ.
ಯಲಹಂಕ ವಿಶೇಷ ತಹಸೀಲ್ದಾರ್ ಮುನಿಸಾಮಿ ರೆಡ್ಡಿ ಎಂಬುವರು ತಪ್ಪಿಸಿಕೊಂಡಿದ್ದು, ಮಧ್ಯವರ್ತಿಗಳಾದ ನಾಗರಾಜ್ ಮತ್ತು ಸಂದೀಪ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಕೀಲ ಮಹೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಪಹಣಿಯಲ್ಲಿ ಭೂ ಮಾಲೀಕನ ಹೆಸರು ಹೆಸರು ಅರ್ಜಿ ಸಲ್ಲಿಸಿದ್ದರು. ಆದರೆ, ಹೆಸರು ಸೇರಿಸಲು ₹10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. 3 ಲಕ್ಷ ರು. ಮುಂಗಡವಾಗಿ ಆರೋಪಿಗಳು ಪಡೆದಿದ್ದರು ಎನ್ನಲಾಗಿದ್ದು, ಬಳಿಕ 2 ಲಕ್ಷ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.