ಬೆಂಗಳೂರು:ಆಯುಕ್ತರು, ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. ಆಗಸ್ಟ್ 31ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅತಿಥಿ ಉಪನ್ಯಾಸಕರಿಗೆ ಎಷ್ಟು ವೇತನ? ಎಂದು ಸಹ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
2024-25ನೇ ಸಾಲಿನ 1, 3 & 5ನೇ ಸೆಮಿಸ್ಟರ್ ಅವಧಿಯು ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಮುಕ್ತಾಯಗೊಂಡಿದ್ದು 2, 4 & 6ನೇ ಸೆಮಿಸ್ಟರ್ ಪ್ರಾರಂಭವಾಗಲಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಲಭ್ಯವಾಗುವ ಹೆಚ್ಚುವರಿ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಜಾರಿಯಲ್ಲಿರುವ ಯು.ಜಿ.ಸಿ. 2018 ರ ಮಾರ್ಗಸೂಚಿಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕಗಳೊಂದಿಗೆ (ಎಸ್‌ಸಿ / ಎಸ್ ಟಿ/ಓಬಿಸಿ/ ವಿಶೇಷ ಚೇತನರಿಗೆ ಶೇ 50) ಮತ್ತು ಎನ್‌ಇಟಿ/ ಎಸ್‌ಎಲ್‌ಇಟಿ/ಕೆಸೆಟ್/ ಪಿಹೆಚ್ ಡಿ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿರುತ್ತದೆ.
ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಕಾಲೇಜು ಆಯ್ಕೆಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ನಂತರದಲ್ಲಿ ಗರಿಷ್ಟ 6 ತಿಂಗಳ ಕಾಲಾವಧಿಗೆ ಗೌರವಧನರಹಿತ Maternity Leave ಪಡೆಯಲು ಅವಕಾಶವಿದ್ದು ಸಾಮಾನ್ಯ ಮುಕ್ತಾಯ ದಿನಾಂಕದವರೆಗೆ ಸೀಮಿತಗೊಳಿಸಿ ಸದರಿ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಲಾಗುವುದು. Maternity Leave ಪಡೆದ ಅತಿಥಿ ಉಪನ್ಯಾಸಕರ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆಮಾಡಿಕೊಳ್ಳಲಾಗುವುದು. ಬದಲಿ ಅತಿಥಿ ಉಪನ್ಯಾಸಕರನ್ನು Maternity Leave ಪಡೆದಿರುವ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಂಡ ನಂತರ ಬಿಡುಗಡೆ ಮಾಡಲಾಗುವುದು.
ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸುವುದರೊಂದಿಗೆ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು/ EDIT ಮಾಡಲು ಮಾಹಿತಿಯನ್ನು ನೀಡುವುದು. ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ರಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಸದರಿ ಅಂತರ್ಜಾಲ ತಾಣವನ್ನು ಗಮನಿಸಲು ತಿಳಿಸಲಾಗಿದೆ.