ಬೆಂಗಳೂರು: ಸರಕಾರಿ ಕೆರೆಯ ಜಾಗವನ್ನು ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಾಣ ಮಾಡಿದ್ದ 3 ಆರೋಪಿಗಳಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕು, ಅತ್ತಿಬೆಲೆ ಹೋಬಳಿ, ಹೆಬ್ಬಗೋಡಿ ಆರೋಪಿಗಳಾದ ಕೃಷ್ಣಪ್ಪ, ನಂಜಪ್ಪ, ರಾಮಯ್ಯ, ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ, ಲಕ್ಷ್ಮೀದೇವಿ ಮತ್ತು ಪಿಳ್ಳಪ್ಪ ಅವರು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡು ಶೌಚಾಲಯ ಮತ್ತು ವಾಸದ ಮನೆಗಳನ್ನು ನಿರ್ಮಾಣ ಮಾಡಿದ್ದು, ಅವರ ವಿರುದ್ಧ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಸಾಕ್ಷ್ಯಾಧಾರಗಳನ್ನು ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿದಾಗ ಆರೋಪಿಗಳು ಸರಕಾರಿ ಕೆರೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಧೃಡಪಟ್ಟಿದ್ದರಿಂದ ಆರೋಪಿಗಳಾದ ಎಂ.ವೆಂಕಟೇಶ್, ಎಚ್.ಎಂ.ಸುಬ್ಬಣ್ಣ ಮತ್ತು ಲಕ್ಷ್ಮೀದೇವಿ ಅವರಿಗೆ 1 ವರ್ಷ ಜೈಲು ಮತ್ತು 5,000 ರು. ದಂಡ ವಿಧಿಸಿ, 13 ಡಿ. 2024ರಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶಿಸಿದೆ.