ನವದೆಹಲಿ: ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕರಿಗೆ ಹಣಕಾಸಿನ ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್ ನಷ್ಟ ಅನುಭವಿಸಿದವಗೆ ಹಣ ಮರಳಿಸಲು ಎಸ್‌ಬಿಐಗೆ ಸೂಚನೆ ನೀಡಿದೆ.
ಇದೇ ವೇಳೆ ಗ್ರಾಹಕರು ಕೂಡಾ ಜಾಗ್ರತೆ ವಹಿಸಬೇಕು, ಒಟಿಪಿ ಸಂಖ್ಯೆ, ಸಿವಿವಿ, ಎಟಿಎಂ ಪಿನ್‌ನಂಥ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವುದನ್ನು ಬಿಡಬೇಕು ಎಂದು ಸಲಹೆ ನೀಡಿದೆ.
ಪ್ರಕರಣದ ಹಿನ್ನೆಲೆ: ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನ್ ನಲ್ಲಿ 4000 ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಆ ವಸ್ತುವನ್ನು ಮರಳಿಸುವ ಪ್ರಕ್ರಿಯೆ ವೇಳೆ ಕಸ್ಟಮರ್ ಕೇರ್ ಹೆಸರಿನಲ್ಲಿ ಪಲ್ಲಬ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ನಿರ್ದಿಷ್ಟ ಆ್ಯಪ್ ಡೌನ್ ಲೋಡ್‌ಗೆ ಸೂಚಿಸಿದ್ದ. ಪಲ್ಲಬ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಕಸ್ಟಮರ್ ಕೇರ್ ಎಂದು ಹೇಳಿದ್ದ ವ್ಯಕ್ತಿಗೆ ಎಂಪಿನ್, ಒಟಿಪಿ ಎಲ್ಲವನ್ನೂ ನೀಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅವರ ಖಾತೆಯಿಂದ 94204 ರು. ಹಣವನ್ನು ಖಾತೆಯಿಂದ ವಂಚಿಸಲಾಗಿತ್ತು.
ಇದನ್ನು ನಿಯಮದಂತೆ 24 ಗಂಟೆಯಲ್ಲಿ ಪಲ್ಲಬ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನೀವು ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಬ್ಯಾಂಕ್‌ನ ತಪ್ಪಿಲ್ಲ. ಹಣ ಮರ ಳಿಸಲಾಗಲ್ಲ ಎಂದು ಬ್ಯಾಂಕ್ ಹೇಳಿತ್ತು.
ಈ ಬಗ್ಗೆ ಪಲ್ಲಬ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಬ್ ಪರ ತೀರ್ಪು ನೀಡಿತ್ತು. ಇದನ್ನು ಎಸ್‌ಬಿಐ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ಈ ಕುರಿತು ತೀರ್ಪು ನೀಡಿರುವ ಸುಪ್ರೀಂ, ‘ಮೂರನೇ ವ್ಯಕ್ತಿಯಿಂದಾದ ವಂಚನೆಗೆ ಗ್ರಾಹಕ ಹೊಣೆಯಲ್ಲ ಎಂದು ಆರ್‌ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್‌ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಯೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್‌ಬಿಐ ವಿಫಲವಾಗಿದೆ. ಈ ಹಿನ್ನೆಲೆ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್‌ಬಿಐಗೆ ನ್ಯಾಯಪೀಠ ಸೂಚಿಸಿದೆ.