ಬೆಂಗಳೂರು: ನ್ಯಾಕ್ ಮಾನ್ಯತೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು ವಿವಿಯ ಗಣಕ ವಿಜ್ಞಾನ ಹಾಗೂ ತಂತ್ರಾಂಶ ವಿಭಾಗದ ಪ್ರಾಧ್ಯಾಪಕ, ನ್ಯಾ ಮಂಡಳಿ ನಿರ್ದೇಶಕ ಎಂ.ಹನುಮಂತಪ್ಪ, ದಾವಣಗೆರೆ ವಿವಿ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ್ ಅವರು ಅಕ್ರಮ ನಡೆಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಿಬಿಐ ನಮ್ಮ ಇಲಾಖೆಗೆ ಈವರೆಗೆ ಅಧಿಕೃತ ವರದಿ ನೀಡಿಲ್ಲ. ಒಂದು ವೇಳೆ ಇವರ ಬಂಧನವಾದರೆ ಮತ್ತು ಈ ಬಗ್ಗೆ ಸಿಬಿಐ ಅಧಿಕೃತ ವರದಿ ನೀಡಿದರೆ ನಾವು ಶಿಸ್ತುಕ್ರಮ ಜರುಗಿಸುತ್ತೇವೆ ಎಂದರು.
ಗುಂಟೂರಿನ ಕೋನೇರು ಲಕ್ಷ್ಮಯ್ಯ ಎಜುಕೇಷನ್ ಪ್ರತಿಷ್ಠಾನಕ್ಕೆ ನ್ಯಾಕ್ ‘ಎ’ ಪ್ಲಸ್ ಪ್ಲಸ್ ಗ್ರೇಡ್ ಪಡೆಯಲು ಲಂಚ ನೀಡಿದ ಆರೋಪ ಕೇಳಿಬಂದಿದ್ದು, ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದೆ.ದಾವಣಗೆರೆ ವಿವಿ ಪ್ರಾಧ್ಯಾಪಕಿ ಡಾ.ಗಾಯತ್ರಿ ದೇವರಾಜ್ ಅವರನ್ನು ಈಗಾಗಲೇ ಲಂಚದ ಹಣ ಪಡೆದ ಆರೋಪದಲ್ಲಿ ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.