ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ಗೆ ಹ್ಯಾಕರ್ ಶ್ರೀಕಿ ಜೊತೆ ವ್ಯವಹಾರಿಕ ನಂಟು ಇತ್ತು ಎಂದು ಆರೋಪ ತನಿಖೆಯಲ್ಲಿ ಬಯಲಾಗಿದ್ದು, ಈ ಆರೋಪ ಹಿನ್ನೆಲೆಯಲ್ಲಿ ನಾಳೆ ಫೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್ ನೀಡಿದೆ.
ಕೆಲವು ತಿಂಗಳ ಹಿಂದೆ ಕೂಡ ಎಸ್ಐಟಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದರು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರೂಪಾಯಿ ಹಣವನ್ನು ವ್ಯವಹಾರಿಕವಾಗಿ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಕಾಟನ್‌ಪೇಟೆ ಹ್ಯಾಕಿಂಗ್ ಕೇಸ್‌ನಲ್ಲಿ ಶ್ರೀಕಿ ಜೊತೆ ವ್ಯವಹಾರಿಕ ಸಂಬಂಧದ ಅನುಮಾನದಲ್ಲಿ ಈ ಹಿಂದೆ ವಿಚಾರಣೆ ನಡೆಸಲಾಗಿತ್ತು. ಇದೀಗ ಮೊಹಮ್ಮದ್ ನಲಪಾಡ್ ಆರೋಪಿ ಎಂದು ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.