ಸುದ್ದಿ

ಕ್ರಿಮಿನಲ್ ಪ್ರಕರಣ; ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ, ₹5.25 ಲಕ್ಷ ದಂಡ

Share It

ಬೆಂಗಳೂರು: ನಕಲಿ ದಾಖಲೆ ನೀಡಿ ಬ್ಯಾಂಕ್‌ಗೆ ವಂಚಿಸಿದ ಕ್ರಿಮಿನಲ್ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ವಂಚನೆ ಪ್ರಕರಣದ ಆದೇಶ ಕಾಯ್ದಿರಿಸಿದ್ದ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಗುರುವಾರ ತೀರ್ಪು ಪ್ರಕಟಿಸಿದರು.

ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ-1988ರ ಕಲಂ 120 ಬಿ, 420, 467 ಮತ್ತು 471ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಕೃಷ್ಣಯ್ಯ ಶೆಟ್ಟಿ ಅವರಿಗೆ ₹5.25 ಲಕ್ಷ ಹಾಗೂ ಮೊದಲನೇ ಆರೋಪಿ ಎಂಟಿವಿ ರೆಡ್ಡಿ ಅವರಿಗೆ ₹7.75 ಲಕ್ಷ ದಂಡ ವಿಧಿಸಲಾಗಿದೆ. ಇತರೆ ಆರೋಪಿಗಳಾದ ಮುನಿರಾಜು ಮತ್ತು ಶ್ರೀನಿವಾಸ್ ಅವರೂ ಶಿಕ್ಷೆ ವಿಧಿಸಲಾಗಿದೆ.

ಆರೋಪಿ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಅವರ ಮನವಿಯ ಮೇರೆಗೆ ನ್ಯಾಯಾಧೀಶರು ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತಿನಲ್ಲಿ ಇರಿಸಿ ಆದೇಶಿಸಿದ್ದು, ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿದ್ದಾರೆ. ₹5.25 ಲಕ್ಷ ಬಾಂಡ್ ಹಾಗೂ ಒಬ್ಬರ ಭದ್ರತೆ ಒದಗಿಸಲು ಕೋಟ್೯ ಸೂಚಿಸಿದೆ.

ಏನಿದು ಪ್ರಕರಣ?: ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮಾಲೀಕರಾಗಿದ್ದರು. ಈ ವೇಳೆ ಅವರು ಬಿಟಿಎಸ್‌, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್, ಐಟಿಐ, ಎಚ್‌ಎಎಲ್, ಬಿಇಎಂಎಲ್ ಮತ್ತು ಎಡಿಇ ಸಾರ್ವಜನಿಕ ಉದ್ದಿಮೆಗಳ 181 ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದಾರೆ.

ಬ್ಯಾಂಕ್‌ನಿಂದ ಪಡೆದಿದ್ದ ಮೊತ್ತದಲ್ಲಿ ₹3.53 ಕೋಟಿ ಸಾಲ ತೀರಿಸಿಲ್ಲ ಹಾಗೂ ₹7.17 ಕೋಟಿ ಸಾಲಕ್ಕೆ ನಕಲಿ ದಾಖಲೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ಮುಖ್ಯ ವಿಚಕ್ಷಣಾ ದಳದ ಅಂದಿನ ಮುಖ್ಯಸ್ಥ ಆ‌ರ್.ಡಿ.ನಾಯ್ಡು ಅವರು ನೀಡಿದ್ದ ದೂರು ಆಧರಿಸಿ, ಸಿಬಿಐ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.


Share It

You cannot copy content of this page