ಬೆಂಗಳೂರು: ಪೀಣ್ಯದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದ 53 ಕುಟುಂಬಗಳನ್ನು ತೆರವುಗೊಳಿಸಲು ಯಾರ ಆದೇಶವಿತ್ತು ಎಂಬುದರ ಬಗ್ಗೆ ಗುರುವಾರ ವಿವರಣೆ ನೀಡಬೇಕು’ ಎಂದು ನಿರ್ದೇಶಿಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಪಾಲನೆ ಮಾಡದ ಪ್ರಾಸಿಕ್ಯೂಷನ್ ನಡೆಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತೆರವು ಕಾರ್ಯಾಚರಣೆ ವೇಳೆ ಮಾದಿಗ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ಸ್ಥಳೀಯ ಶಾಸಕ ಮುನಿರತ್ನ ಜಾತಿನಿಂದನೆಯ ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಲಾದ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಗುರುವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು, ‘ವರದಿ ಸಲ್ಲಿಕೆಗೆ ಇನ್ನಷ್ಟು ಸಮಯಾವಕಾಶ ನೀಡಬೇಕು’ ಎಂದು ಕೋರಿದರು. ಈ ಮನವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶುಕ್ರವಾರ ತಪ್ಪದೇ ವರದಿ ಸಲ್ಲಿಸಬೇಕು’ ಎಂದು ಎಚ್ಚರಿಕೆಯ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದರು.