ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬನಿಗೆ ಆಶ್ರಯ ನೀಡಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ತೀರ್ಪು ನೀಡಿದೆ.
ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದ ಉದಯ್ ಕುಮಾರ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ಪ್ರಕಟಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಐಪಿಸಿ ಸೆಕ್ಷನ್ 216 ರ (ಅಪರಾಧಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾದರೆ ಆಶ್ರಯ ನೀಡಿದ ವ್ಯಕ್ತಿಗೆ ಅಪರಾಧಿಯು ಶಿಕ್ಷೆಗೆ ಗುರಿಯಾಗಿರುವುದರ ಸಂಪೂರ್ಣ ಮಾಹಿತಿ ಇರಬೇಕು. ಜೊತೆಗೆ, ಉದ್ದೇಶಪೂರ್ವಕವಾಗಿ ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸುವಂತಹ ಅಂಶಗಳಿರಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳಿರಬೇಕು.
ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್ ದಾಖಲೆಗಳು ಲಭ್ಯವಾಗಿವೆ. ಅದರಂತೆ ಉದ್ದೇಶಪೂರ್ವಕವಾಗಿ ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ಸಂದೇಶ ಅಥವಾ ಸಂವಹನ ನಡೆದಿಲ್ಲ.
ಅಪರಾಧಿಯನ್ನು ಅರ್ಜಿದಾರರ ಮನೆಯಿಂದ ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಅಂಶವನ್ನು ಹೊರತುಪಡಿಸಿ, ಅರ್ಜಿದಾರರಿಗೆ ಅಪರಾಧಿಯ ಶಿಕ್ಷೆಯ ಬಗ್ಗೆ ತಿಳಿದಿತ್ತು ಮತ್ತು ಅವರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಸಾಕ್ಷ್ಯಾಧಾರಗಳಿಲ್ಲದೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ಕೊಲೆ ಆರೋಪದ ಪ್ರಕರಣದಲ್ಲಿ ಶರಣ್ ಅಲಿಯಾಸ್ ಶರಣ್ ಪೂಜಾರಿ ಎಂಬಾತನಿಗೆ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಅಪರಾಧಿ ಶರಣ್ ತಲೆ ಮರೆಸಿಕೊಂಡಿದ್ದರಿಂದ ಆತನನ್ನು ಬಂಧಿಸಲು ಬರ್ಕೆ ಠಾಣಾ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅಂತಿಮವಾಗಿ ಉದಯ್ ಕುಮಾರ್ ಶೆಟ್ಟಿ ಮನೆಯಲ್ಲಿ ಅಪರಾಧಿಯನ್ನು ಬಂಧಿಸಿದ್ದರು.
ನಂತರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಆಶ್ರಯ ನೀಡಿದ ಆರೋಪದಡಿ ಉದಯ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಉದಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರ ಉದಯ್ ಪರ ವಕೀಲರು ವಾದ ಮಂಡಿಸಿ, ಅಪರಾಧಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಹಾಜರುಪಡಿಸಿಲ್ಲ. ಅರ್ಜಿದಾರರ ಮನೆಗೆ ಅಪರಾಧಿ ಬಂದಾಗ ಅವರಿಗೆ ಆತನ ವಿರುದ್ಧದ ಪ್ರಕರಣದ ಕುರಿತಂತೆ ಮತ್ತು ಕಾನೂನು ಸಂಘರ್ಷದ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಅವರಿಗೆ ಆಶ್ರಯ ನೀಡಿದ್ದರು ಎಂದು ಪೀಠಕ್ಕೆ ವಿವರಿಸಿದ್ದರು.
(CRIMINAL PETITION NO. 14164 OF 2024