ಬೆಂಗಳೂರು: ಈಗಾಗಲೇ ಮೃತಪಟ್ಟಿರುವ ಮಾವನ ಆಸ್ತಿಗೆ ತನ್ನನ್ನೇ ಉತ್ತರಾಧಿಕಾರಿಯಾಗಿ ಘೋಷಿಸಬೇಕು ಎಂದು ಕೋರಿ ಅಳಿಯನೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮೃತ ಮಾವನಿಗೆ ಗಂಡ ಮಕ್ಕಳಿಲ್ಲ. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಹಿರಿಯ ಅಳಿಯನಾಗಿರುವ ತನ್ನನ್ನೇ ಮೃತನ ಆಸ್ತಿಯನ್ನು ಪ್ರತಿನಿಧಿಸಲು ಮತ್ತು ಹಿತಾಸಕ್ತಿ ರಕ್ಷಣೆ ಮಾಡಲು ಕಾನೂನುಬದ್ಧ ಉತ್ತರಾಧಿಕಾರಿ ಎಂಬುದಾಗಿ ಘೋಷಣೆ ಮಾಡುವಂತೆ ಕೋರಿ ಶಿವಮೊಗ್ಗದ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನಗಂಟಿ ಅವರಿದ್ದ ಪೀಠ, ಕಾನೂನು ಬದ್ಧ ಉತ್ತರಾಧಿಕಾರಿ ಮಾತ್ರ ಮೃತಪಟ್ಟ ವ್ಯಕ್ತಿಯ ಆಸ್ತಿ ಪ್ರತಿನಿಧಿಸುವ ಮತ್ತು ಹಿತಾಸಕ್ತಿ ರಕ್ಷಣೆ ಮಾಡುವ ಜವಾಬ್ದಾರಿ ಅಥವಾ ಕರ್ತವ್ಯ ಹೊಂದಿರುತ್ತಾನೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಮೃತರ ಆಸ್ತಿಗೆ ಉತ್ತರಾಧಿಕಾರಿಯಾಗುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಅಳಿಯ ತನ್ನದೇ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ಮಾವನ ಆಸ್ತಿಯಲ್ಲಿ ಪತ್ನಿಗೆ ಪಾಲು ನೀಡಲು ಆದೇಶಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪತ್ನಿಯ ತಂದೆ ಮೃತಪಟ್ಟಿದ್ದರು. ಇದರಿಂದ ತಾನೇ ಮಾವನ ಮನೆಗೆ ಮನೆ ಅಳಿಯ, ಅವರ ಆಸ್ತಿಯನ್ನು ಪ್ರತಿನಿಧಿಸುವ ಕಾನೂನುಬದ್ಧ ಉತ್ತರಾಧಿಕಾರಿಯಾಗಿ ನನ್ನನ್ನೇ ಘೋಷಣೆ ಮಾಡಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
WRIT PETITION NO. 49754 OF 2018 (GM-CPC)