ಬೆಂಗಳೂರು: ಸಾಕಷ್ಟು ಕಾಲದಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ.
ಜಿ.ಪಂ-ತಾ.ಪಂ ಮೀಸಲು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮುಚ್ಚಳಿಕೆ ನೀಡಿದೆ. ಇದನ್ನು ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ನ್ಯಾಯಾಲಯಕ್ಕೆ ಸರ್ಕಾರ ನೀಡಿರುವ ವಾಗ್ದಾನದಂತೆಯೇ ನಡೆದುಕೊಂಡರೆ ಜುಲೈ ಅಥವಾ ಆಗಸ್ಟ್ ಸುಮಾರಿಗೆ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟಿಸಿಲ್ಲ ಎಂದು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಿತ್ತು. ಸರ್ಕಾರ ಇದೀಗ ಮೀಸಲು ಪ್ರಕಟಿಸುವುದಾಗಿ ತಿಳಿಸಿದ್ದರಿಂದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಮೇ ಅಂತ್ಯದೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗುವುದು. ಈ ಸಂಬಂಧ ಅಫಿಡವಿಟ್ ಸಲ್ಲಿಸಲಾಗುವುದು. ಅದರಂತೆ ಚುನವಣಾ ಆಯೋಗವು ಜೂನ್, ಜುಲೈ, ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು. ಕ್ಷೇತ್ರ ಪುನರ್ ವಿಂಗಡಣೆಯಾಗದಿದ್ದರಿಂದ ನಾವು ಕಾಲಾವಕಾಶ ಪಡೆದುಕೊಂಡಿದ್ದೆವು ಎಂದು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ವಾದಿಸಿ, ಮೀಸಲು ಪಟ್ಟಿಯನ್ನು ಒದಿಗಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರವು ಮೇ ಅಂತ್ಯದೊಳಗೆ ಕ್ಷೇತ್ರಗಳ ಮೀಸಲು ಪಟ್ಟಿ ಅಧಿಸೂಚನೆ ಪ್ರಕಟಿಸಬೇಕು. ಮೀಸಲು ಪಟ್ಟಿ ದೊರೆತರೆ ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಲಿದೆ. ಸರ್ಕಾರ ವಾಗ್ದಾನ ಮೀರಿದರೆ ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯವನ್ನು ಆಯೋಗಕ್ಕೆ ನೀಡಬೇಕು ಎಂದು ಕೋರಿದರು.
ವಾದ-ಪ್ರತಿವಾದವನ್ನು ದಾಖಲಿಸಿದ ನ್ಯಾಯಪೀಠ ಸರ್ಕಾರ ನಿಗದಿತ ವೇಳೆಗೆ ಮೀಸಲು ಪಟ್ಟಿ ನೀಡಲು ವಿಫಲವಾದರೆ ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಹೊಂದಿದೆ ಎಂದು ತಿಳಿಸಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲು ನಿಗದಿಪಡಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ 5 ಲಕ್ಷ ದಂಡ ವಿಧಿಸಿತ್ತು.