ಸುದ್ದಿ

ಸಹಾಯ ಮಾಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾನ್‌ಸ್ಟೆಬಲ್‌ ಬಂಧನ

Share It

ಬೆಂಗಳೂರು: ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತೆಗೆ ಸಹಾಯ ಮಾಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪೊಲೀಸ್‌ ಕಾನ್‌ಸ್ಟೆಬಲ್‌ ಸೇರಿ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

17 ವರ್ಷದ ಸಂತ್ರಸ್ತೆಯ ತಾಯಿ ನೀಡಿರುವ ದೂರು ಆಧರಿಸಿ ಬೊಮ್ಮನಹಳ್ಳಿ ಠಾಣೆ ಕಾನ್‌ಸ್ಟೆಬಲ್‌ ಅರುಣ್ ತೊಣೆಪ ಹಾಗೂ ಸಂತ್ರಸ್ತೆಯ ಸ್ನೇಹಿತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣಾ ವ್ಯಾಪ್ತಿಯಲ್ಲಿ ತನ್ನ ತಾಯಿಯೊಂದಿಗೆ ನೆಲಸಿರುವ ಸಂತ್ರಸ್ತೆಗೆ ಪಕ್ಕದ ಮನೆ ನಿವಾಸಿ, ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಆರೋಪಿಯು ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ, ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಈ ವಿಷಯವನ್ನು ಬಾಲಕಿ, ತನ್ನ ತಾಯಿಗೆ ತಿಳಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಸ್ನೇಹಿತನ ವಿರುದ್ಧ ಅತ್ಯಾಚಾರ ದೂರು ನೀಡಲು ತೆರಳಿದ್ದ ಸಂತ್ರಸ್ತೆಯನ್ನು ಕಾನ್‌ಸ್ಟೆಬಲ್‌ ಅರುಣ್‌ ಪರಿಚಯಿಸಿಕೊಂಡು ನ್ಯಾಯ ಕೊಡಿಸುವ ಭರವಸೆಯ ಜತೆಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಕಳೆದ ಡಿಸೆಂಬರ್‌ನಲ್ಲಿ ಬಿಟಿಎಂ ಲೇಔಟ್‌ನ ಹೋಟೆಲ್ ಒಂದರ ಕೊಠಡಿಗೆ ಬಾಲಕಿಯನ್ನು ಕರೆಸಿಕೊಂಡ ಕಾನ್‌ಸ್ಟೆಬಲ್‌, ಮದ್ಯದಲ್ಲಿ ಅಮಲು ಬರುವ ಔಷಧಿ ಬೆರೆಸಿ ಕುಡಿಸಿ, ಆತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ತನ್ನ ಬಳಿ ಇರುವ ಖಾಸಗಿ ವಿಡಿಯೊಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡ ಮೈಕೋ ಲೇಔಟ್ ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದು, ಬೊಮ್ಮನಹಳ್ಳಿ ಠಾಣಾ ಪೊಲೀಸರು ಪೋಕ್ಸೋ ಪ್ರಕರಣದಡಿ ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page