ಚೆನ್ನೈ: ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಹಿಂದಿ ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸುತ್ತಿರುವ ಬೆನ್ನಲ್ಲೆ ತ್ರಿಭಾಷಾ ನೀತಿಯನ್ನು ಹೇರುವ ಪ್ರಯತ್ನಗಳನ್ನು ವಿರೋಧಿಸಿ ನಟಿ-ರಾಜಕಾರಣಿ ರಂಜನಾ ನಾಚಿಯಾರ್ ಮಂಗಳವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಬಿಜೆಪಿ ತ್ರಿಭಾಷಾ ಸೂತ್ರದ ಪರ ಇರುವುದು ಭ್ರಮನಿರಸನಕ್ಕೆ ಕಾರಣವಾಗಿದೆ. ದ್ರಾವಿಡ ಸಿದ್ಧಾಂತ ಹಾಗೂ ತಮಿಳುನಾಡಿನ ಬಗ್ಗೆ ಬಿಜೆಪಿ ದ್ವೇಷ ಭಾವನೆ ಹೊಂದಿದೆ’ ಎಂದು ಆರೋಪಿಸಿದ್ದಾರೆ.
‘ರಾಷ್ಟ್ರವು ಸುರಕ್ಷಿತವಾಗಿರಬೇಕಾದರೆ, ತಮಿಳು ನಾಡು ಸಮೃದ್ಧವಾಗಿರಬೇಕು. ಪಕ್ಷದೊಳಗೆ ನನ್ನ ಬೆಳವಣಿಗೆಗೆ ಬಿಜೆಪಿ ಅನುಕೂಲಕರ ವಾತಾವರಣ ಕಲ್ಪಿಸಲಿಲ್ಲ’ ಎಂದು ಹೇಳಿದ್ದಾರೆ.