ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಕುರಿತಾಗಿ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ನದಿ ತಟದಲ್ಲಿ ನಡೆಯುತ್ತಿರುವ ಅನಧಿಕೃತ ಕಾರ್ಯಚಟುವಟಿಕೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ 2,904 ಮೆಟ್ರಿಕ್ ಟನ್ ಮರಳನ್ನು ದಾಸ್ತಾನು ಇರಿಸಿಕೊಂಡಿದ್ದಾರೆ ಎಂದು ಭಗವಂತ ಅಲಗೂರು ಎಂಬುವರಿಗೆ ಜಮಖಂಡಿ ತಹಶಿಲ್ದಾರ್ ನೋಟಿಸ್ ನೀಡಿದ್ದರು.ಈ ನೋಟಿಸ್ ಪ್ರಶ್ನಿಸಿ ಭಗವಂತ ಅಲಗೂರು ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ನದಿಗಳ ಗಡಿ, ಮರಳಿನ ದಿಬ್ಬದಲ್ಲಿ ಏನೇ ಬದಲಾವಣೆಗಳಾದರೂ ಆ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳವ ವ್ಯವಸ್ಥೆ ಸಂಬಂಧಿತ ಇಲಾಖೆಗಳಲ್ಲಿ ಆಗಬೇಕು. ಅಲ್ಲದೆ ಲಭ್ಯವಿರುವ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಇದು ಸಕಾಲ ಎಂದು ಹೇಳಿತು.
ಅಕ್ರಮ ಮರಳು ಗಣಿಗಾರಿಕೆಯು ನದಿಗಳು ಬರಿದಾಗಲು ಕಾರಣವಾಗಿದೆ. ಇದು ಹೀಗೆ ಮುಂದುವರಿದರೆ ಇನ್ನಷ್ಟು ಜಟಿಲ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ,ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಣಿ ಇಲಾಖೆಯ ನಿರ್ದೇಶಕ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಮತ್ತು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ‘ಇಸ್ರೋ’ದಿಂದ ಅಗತ್ಯ ನೆರವು ಪಡೆದು ಈ ಕುರಿತಾಗಿ ನದಿ ಪಾತ್ರದ ಕಾರ್ಯಚಟುವಟಿಕೆ ಬಗ್ಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಈ ಕುರಿತು ಆರು ವಾರದೊಳಗೆ ವರದಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.
ಮುಂದಿನ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಿದ ಹೈಕೋರ್ಟ್ ಈ ಮಧ್ಯೆ ಅರ್ಜಿದಾರರಿಗೆ ತಹಶಿಲ್ದಾರ್ ಅವರು ನೀಡಿದ್ದ ನೋಟಿಸ್ ರದ್ದುಗೊಳಿಸಿ ಆದೇಶಿಸಿದೆ.