ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದಿಂದ ಏಳು ವರ್ಷ ಜೈಲು ಶಿಕ್ಷೆಯಾಗಿರುವ ಗಂಗಾವತಿ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
‘ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ಮೇ 6ರಿಂದ ಅನರ್ಹ ಆದೇಶವು ಜಾರಿಗೆ ಬರಲಿದ್ದು, ಆರು ವರ್ಷಗಳವರೆಗೆ ಮುಂದುವರಿಯಲಿದೆ. ಹೀಗಾಗಿ ರಾಜ್ಯ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ’ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ಕರ್ನಾಟಕ- ಆಂಧ್ರಪ್ರದೇಶ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ನ್ಯಾಯಾಲಯವು ರೆಡ್ಡಿ ಮತ್ತು ಇತರ ಮೂವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹10 ಸಾವಿರ ದಂಡ ವಿಧಿಸಿದೆ.