ಸುದ್ದಿ

ವಿಕಲಚೇತನ ಪತಿಯಿಂದ ಪತ್ನಿಗೆ ಜೀವನಾಂಶ ಪಾವತಿ ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ಆದೇಶ

Share It

ಬೆಂಗಳೂರು: ಪತಿಯು ಪಾರ್ಶ್ವವಾಯುವಿಗೆ ಒಳಗಾಗಿ ಶೇ.75ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಜೀವನಾಂಶ ನೀಡುವಂತೆ ಪತ್ನಿ ಒತ್ತಾಯಿಸುತ್ತಿರುವುದು ಏಕೆ? ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋಟ್೯ ವಿಕಲಚೇತನ ವ್ಯಕ್ತಿಗೆ ನಿರ್ದೇಶನ ನೀಡಲು ನಿರಾಕರಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿ ತೀರ್ಪು ನೀಡಿದೆ.

ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ಹಾಗೂ ಮಾಸಿಕ ಜೀವನಾಂಶ ನಿರ್ವಹಣೆ ಮೊತ್ತ ಹೆಚ್ಚಳ ಕೋರಿ ಪತ್ನಿಯೂ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ಪತ್ನಿಯೂ ಸಂಪಾದನೆಗೆ ಅರ್ಹಳು ಎಂಬ ಅಂಶ ಗಮನಿಸಿದ ನ್ಯಾಯಪೀಠ, ಪತಿಗೆ ನೀಡಿದ ಅಂಗವೈಕಲ್ಯ ಪ್ರಮಾಣಪತ್ರ ಉಲ್ಲೇಖಿಸಿ, ” ಅಂಗವೈಕಲ್ಯದಿಂದಾಗಿ ಪತಿ ಸಂಪಾದಿಸಲು ಅಸಮರ್ಥನಾಗಿದ್ದರೂ ಜೀವನಾಂಶ ನೀಡಲು ಹೆಂಡತಿ ಒತ್ತಾಯಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದೆ.

ಪತಿಯು ಭರಿಸಬೇಕಾದ ಜೀವನಾಂಶವು 19,04,000 ರೂ. ಬಾಕಿ ಇದೆ ಎಂದು ಮೆಮೊದಲ್ಲಿ ತಿಳಿಸಲಾಗಿದೆ. ಆದರೆ, ಈಗ ನ್ಯಾಯಾಲಯವು ಬಾಕಿ ಜೀವನಾಂಶ ಪಾವತಿಸಲು ನಿರ್ದೇಶಿಸಿದರೆ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ನೂಕಿದಂತಾಗುತ್ತದೆ ” ಎಂದು ಅಭಿಪ್ರಾಯಪಟ್ಟಿದೆ.

“ಪತಿಯ ತಂದೆ ಅಥವಾ ಅರ್ಜಿದಾರರ ತಂದೆ ಮೊಮ್ಮಗನ ಶಿಕ್ಷಣ ಮತ್ತು ಆಕೆಯ ವೃತ್ತಿ ಮತ್ತು ಮೊಮ್ಮಗನ ಜೀವನದ ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳಬೇಕಾಗಿರುವುದು ಸೂಕ್ತವೆನಿಸುತ್ತದೆ. ಜೀವನಾಂಶವನ್ನು ಶೇ. 70ರಷ್ಟು ಹೆಚ್ಚಿಸಬೇಕೆಂಬ ಹೆಂಡತಿಯ ಹಕ್ಕು ಮೇಲ್ನೋಟಕ್ಕೆ ಸಮರ್ಥನೀಯವಲ್ಲ. ಪತಿಯ ಅಂಗವೈಕಲ್ಯದ ದಿನಾಂಕದವರೆಗಿನ ನಿರ್ವಹಣೆಯ ಬಾಕಿಯನ್ನು ಪತಿಯ ತಂದೆ ಪೂರೈಸಬೇಕು,” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ವಿಚ್ಛೇದಿತ ಪತಿಯ ತಂದೆ ಹಲವಾರು ಆಸ್ತಿಗಳನ್ನು ಹೊಂದಿದ್ದು, ಹೆಂಡತಿ ಮತ್ತು ಮಗುವಿನ ಜೀವನಾಂಶ ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದ ತಿರಸ್ಕರಿಸಿದ ನ್ಯಾಯಾಲಯ, ಈ ಹಂತದಲ್ಲಿ ವಾದ ಒಪ್ಪಿಕೊಳ್ಳಲಾಗುವುದಿಲ್ಲ ಎಂದಿದೆ. ಪತಿ ತನಗೆ ಶೇ.75 ರಷ್ಟು ಅಂಗವೈಕಲ್ಯ ಇರುವ ಕಾರಣ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ವೈವಾಹಿಕ ಸಂಬಂಧ ಹದಗೆಟ್ಟ ಮೇಲೆ ಪತಿ-ಪತ್ನಿ ಕೋಟ್೯ನಲ್ಲಿ ವಿಚ್ಛೇದನ ಕೋರಿದ್ದರು. ಪತ್ನಿಯು ಹಿಂದೂ ವಿವಾಹ ಕಾಯಿದೆಯ 1955ರ ಸೆಕ್ಷನ್ 24 ಅಡಿಯಲ್ಲಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರು. ಈ ಕುರಿತು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 15,000 ರೂ. ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಬಾಕಿಯಿರುವಾಗಲೇ ಪತಿಯು ಪಾರ್ಶ್ವವಾಯುವಿಗೆ ಒಳಗಾಗಿ ಶೇ.75ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿ ಉದ್ಯೋಗವನ್ನು ಕಳೆದುಕೊಂಡಿದ್ದರು. ಈ ನಡುವೆ, ಜೀವನಾಂಶ ಬಾಕಿ ಪಾವತಿಸಿಲ್ಲ ಎಂದು ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.


Share It

You cannot copy content of this page