ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾದ ಮಹಿಳೆಗೆ ಇಲ್ಲಿನ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಟಿಬಿ ಡ್ಯಾಂನ ದೇವಿಕಾ ಎಂಬ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಆಲಹಳ್ಳಿ ಗ್ರಾಮದ ಅಂಬರೀಶ್ ಎಂಬವನೊಂದಿಗೆ 2014ರ ಜನವರಿ 25ರಂದು ಮದುವೆಯಾಗಿದ್ದಳು. ಅಲ್ಲದೇ 2014ರ ಮಾರ್ಚ್ 6ರಂದು ಭಾಲ್ಕಿ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಲಾಗಿತ್ತು.
ಈ ಸಂಬಂಧ ಟಿಬಿಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ
ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಆರ್.ಎಚ್. ಅವರು ಆರೋಪಿ ದೇವಿಕಾ ಅಪರಾಧ ಎಸಗಿರುವುದು ರುಜುವಾತಾಗಿದೆ ಎಂದು ಐಪಿಸಿ ಕಲಂ 494 ಅಡಿಯಲ್ಲಿ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ಒಂದು ತಿಂಗಳು ಸಾದಾ ಜೈಲು ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ.ಟಿ. ರೇವಣಸಿದ್ದಪ್ಪ ವಾದ ಮಂಡಿಸಿದ್ದಾರೆ.