ಮಂಗಳೂರು: ಮನೆ ನಿರ್ಮಾಣ ಮಾಡಲು ಮತ್ತು ಜಮೀನಿನಲ್ಲಿರುವ ಕಲ್ಲು ತೆರವು ಮಾಡಲು
ಅಗತ್ಯ ಅನುಮತಿ ನೀಡುವುದಕ್ಕೆ 50 ಸಾವಿರ ರೂ.
ಲಂಚಕ್ಕೆ ಬೇಡಿಕೆ ಇರಿಸಿದ ಗಣಿ ಇಲಾಖೆ ಉಪನಿರ್ದೇಶಕಿ, ಇಬ್ಬರು ಸಿಬಂದಿಗಳು ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ, ಸಿಬಂದಿ ಪ್ರದೀಪ್ ಹಾಗೂ ಉಪನಿರ್ದೇಶಕರ ಚಾಲಕ ಮಧು ಸಿಕ್ಕಿಬಿದ್ದವರು.
ವ್ಯಕ್ತಿಯೊಬ್ಬರು ತನ್ನ ಪರಿಚಯದವರ ಹೆಸರಿನಲ್ಲಿರುವ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬರ್ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ ೦.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಳೆದ ವರ್ಷ ಅ.28ರಂದು ಅರ್ಜಿ ಸಲ್ಲಿಸಿದ್ದರು. ಉಳ್ಳಾಲ ತಹಶೀಲ್ದಾರರು ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ/ದೃಢಿಕರಣ ಪತ್ರ ನೀಡಬಹುದಾಗಿದೆ ಎಂದು ಈ ವರ್ಷ ಮಾರ್ಚ್ 21ರಂದು ವರದಿ ಸಲ್ಲಿಸಿದ್ದರು, ಆದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ
ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ದೂರುದಾರರು ಮಂಗಳೂರು ಗಣಿ ಇಲಾಖೆ ಕಚೇರಿಗೆ ತೆರಳಿದ್ದು, ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ ಸಹಿ ಮಾಡಲು 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗ ದೂರುದಾರರು ಆರೋಪಿಸಿದ್ದರು.
ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬಂದಿ ಪ್ರದೀಪ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ಉಪನಿರ್ದೇಶಕಿ ಕೃಷ್ಣವೇಣಿ ಅವರು ಚಾಲಕ ಮಧು ಎಂಬವರ ಮೂಲಕ 5೦,೦೦೦ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.