ಬೆಂಗಳೂರು: ಐಪಿಎಲ್ ಟ್ರೋಪಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ ಉಂಟಾದ 11 ಸಾವು
ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ವಿಜಯೋತ್ಸವ ಬೇಡ ಎಂದು ಪೊಲೀಸರು ಹೇಳಿದ್ದರೂ, ಕಾರ್ಯಕ್ರಮ ನಡೆಸಲೇಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದರು’ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಶುಕ್ರವಾರ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯೋತ್ಸವ ಆಚರಣೆಗೆ ಅನುಮತಿ ನೀಡಿ ಎಂದು ಆರ್‌ಸಿಬಿಯವರು ಸಲ್ಲಿಸಿದ್ದ ಮನವಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ತಿರಸ್ಕರಿಸಿದ್ದರು. ಕಾರ್ಯಕ್ರಮ ಆಯೋಜಿಸಬೇಡಿ ಎಂದು ಹೇಳಿದ್ದರು’ ಎಂದರು.
ನಂತರ ಆರ್‌ಸಿಬಿಯವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಒಬ್ಬರನ್ನು ಕರೆದುಕೊಂಡು, ಸಿದ್ದರಾಮಯ್ಯ ಅವರ ಬಳಿಗೆ ಹೋದರು. ವಿಧಾನಸೌಧದ ಬಳಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪ್ರಸ್ತಾಪಿಸಿದರು. ಪೊಲೀಸ್ ಕಮಿಷನರ್ ಅವರನ್ನು ಕರೆಸಿದ ಮುಖ್ಯಮಂತ್ರಿ, “ನಾನು ಹೇಳುತ್ತಿದ್ದೇನೆ. ಅನುಮತಿ ನೀಡಿ, ಭದ್ರತೆ ಒದಗಿಸಿ’ ಎಂದು ತಾಕೀತು ಮಾಡಿದರು. ಹೀಗಾಗಿ ಸಿದ್ದರಾಮಯ್ಯ ಅವರನ್ನೇ ಇದರಲ್ಲಿ ತಪ್ಪಿತಸ್ಥನನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.