ಶಿವಮೊಗ್ಗ: ಜಮೀನು ವಿವಾದ ಸಂಬಂಧ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಜನ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದ ಕಾರಣ ಜೀವಾವಧಿ ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ತಾಲೂಕು ಭದ್ರಾಪುರ ಗ್ರಾಮದಲ್ಲಿ 2020 ರಲ್ಲಿ ಬಡ್ಡಿ ಪರಮೇಶ್ ಹಾಗೂ ಅವರು ಮಕ್ಕಳು ಸೇರಿದಂತೆ ಒಟ್ಟು 7 ಜನ ಭದ್ರಾಪುರ ಗ್ರಾಮದ ಕರಿಯಪ್ಪ(65) ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಕೊಲೆ ಸಂಬಂಧ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಬಡ್ಡಿ ಪರಮೇಶ್, ಜಗದೀಶ್, ರಮೇಶ್, ಮಂಜಪ್ಪ, ಗೌತಮ್ ಅಭಿಷೇಕ್, ಶರತ್, ವಿಕ್ರಮ್, ಸಂಜಯ್ ಹಾಗೂ ಕೃತಿಕ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಅಂದಿನ ಭದ್ರಾವತಿಯ ಸಿಪಿಐ ಮಂಜುನಾಥ್ ತನಿಖೆ ನಡೆಸಿದ್ದರು. ನಂತರ ಹೊಳೆಹೊನ್ನೂರು ಪಿಐ ಲಕ್ಷ್ಮೀಪತಿ ಅವರು ಪ್ರಕರಣದ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು