ಸುದ್ದಿ

ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯ: ಜುಲೈನಿಂದ ಹೊಸ ನಿಯಮ ಜಾರಿ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದ್ದು ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಬಿಬಿಎಂಪಿಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಸಲ್ಲಿಸುವುದು ಅವಶ್ಯ. ಇ-ಆಸ್ತಿ ತಂತ್ರಾಂಶದೊಂದಿಗೆ ನಕ್ಷೆ ಮಂಜೂರಾತಿ ಪ್ರಕ್ರಿಯೆ ಏಕೀಕರಣಗೊಳ್ಳಲಿದೆ. ಇದರಿಂದ ಸೇವೆಗಳು ಸರಳವಾಗುತ್ತವೆ ಮತ್ತು ಕಾಲಮಿತಿಯಲ್ಲಿ ಮಂಜೂರಾತಿ ಸಿಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಈ ಸಂಬಂಧ ಸೋಮವಾರ ಅದೇಶ ಹೊರಡಿಸಿರುವ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಕಂದಾಯ ವಿಭಾಗದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಮಾಡಲಾಗಿದ್ದು, ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಈಗಾಗಲೇ ಇ-ಖಾತಾ ನೀಡಲಾಗುತ್ತಿದೆ. ಆದುದರಿಂದ ಸ್ವತ್ತುಗಳ ದತ್ತಾಂಶವು ಇ-ಅಸ್ತಿ ತಂತ್ರಾಂಶದಲ್ಲಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಅದರ ಜತೆಗೆ ಸ್ವತ್ತುಗಳಿಗೆ ಇ-ಖಾತಾವನ್ನು ಆನ್‌ಲೈನ್‌ಮೂಲಕ ನೀಡಲಾಗುತ್ತಿದೆ. ಇದೀಗ ಎರಡೂ ತಂತ್ರಾಂಶವನ್ನು ಏಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ಕಟ್ಟಡನಕ್ಷೆ ಮಂಜೂರಾತಿಗೆ ಅರ್ಜಿಸಲ್ಲಿಸುವವರು ಮೊದಲು ಇ- ಖಾತಾವನ್ನು ಕಡ್ಡಾಯವಾಗಿ ಪಡೆದಿರಬೇಕಿದೆ.

ಹೀಗಾಗಿ ಜು. 1ರಿಂದ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಇ-ಖಾತಾ ಅಥವಾ ಇಪಿಐಡಿ ಸಂಖ್ಯೆಯನ್ನು ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಇ- ಖಾತಾ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇ-ಖಾತಾ ಸಲ್ಲಿಸದ ಅರ್ಜಿಗಳನ್ನು ಕಟ್ಟಡ ನಕ್ಷೆ ಮಂಜೂರಾತಿಗೆ ಪರಿಗಣಿಸದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


Share It

You cannot copy content of this page