ದೆಹಲಿ: ಲಿವಿಂಗ್ ಟುಗೆದರ್ ಗೆಳೆತನದ ನಂತರದ ದಿನಗಳಲ್ಲಿ ವಿವಾಹವಾಗಿ ಸಂಬಂಧವಾಗಿ ಮಾರ್ಪಡದೆ ಇದ್ದಾಗ ಸಂಗಾತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ. ಲಿವಿಂಗ್ ಟುಗೆದರ್ ಗೆಳತಿಯ ದೂರಿನ ಮೇರೆಗೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದ ವ್ಯಕ್ತಿಯನ್ನು ವಂಚನೆ ಆರೋಪದಿಂದ ಸುಪ್ರೀಂ ಕೋರ್ಟ್ ಮುಕ್ತಿಗೊಳಿಸಿದೆ.
ಗೆಳೆತನ ಆರಂಭವಾದ ಹಂತದಲ್ಲಿ ಇಬ್ಬರ ನಡುವಿನ ಸಂಬಂಧ ಒಮ್ಮತದ್ದೇ ಆಗಿರುತ್ತದೆ ಎಂದು ಪೀಠ ವ್ಯಾಖ್ಯಾನಿಸಿದೆ. ಪ್ರಶಾಂತ್ ವಿರುದ್ಧ ಲಿವಿಂಗ್ ಟುಗೆದರ್ ಸಂಗಾತಿಯಾಗಿದ್ದ ಯುವತಿ ಸಲ್ಲಿಸಿದ್ದ ವಂಚನೆ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಮತ್ತು ನ್ಯಾ. ಎನ್. ಕೋಟೇಶ್ವರ ಸಿಂಗ್ ಅವರ ಪೀಠ, ಸಂಗಾತಿಗಳಿಬ್ಬರ ನಡುವೆ ಸಂಬಂಧ ಮೊದಲು ಚೆನ್ನಾಗಿಯೇ ಇತ್ತು. ಬ್ರೇಕಪ್ ಬಳಿಕ ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದೆ.ಸಹಜೀವನದ ಆರಂಭದಲ್ಲಿ ಆರೋಪಿ ಮದುವೆಯಾಗುವ ಭರವಸೆ ನೀಡಿದ್ದ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದೂ ಹೇಳಿದೆ.
ಆರೋಪಿ ಮತ್ತು ದೂರುದಾರ ಯುವತಿ ವಿವಾಹವಾಗದೇ ಇದ್ದರೂ ದೆಹಲಿಯಲ್ಲಿ 2 ವರ್ಷಗಳಿಂದ ಒಂದೇ ಮನೆಯಲ್ಲಿ ಒಟ್ಟಿಗೇ ವಾಸವಿದ್ದರು. ಆರಂಭದಲ್ಲಿ ಮದುವೆಯಾಗಲು ಆಲೋಚಿಸಿದ್ದರು. ನಂತರ ಇಬ್ಬರ ದಾರಿ ಬೇರೆಯಾಗಿತ್ತು. ಮದುವೆಯಾಗಲು ನಿರಾಕರಿಸಿದ ಪ್ರಶಾಂತ್ ವಿರುದ್ಧ 2019ರಲ್ಲಿ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.