ಸುದ್ದಿ

ಸಂಪ್‌ನ ಮುಚ್ಚಳ ಮುಚ್ಚದೆ ಪೋಷಕರ ನಿರ್ಲಕ್ಷ್ಯ: ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಸಾವು

Share It

​ಬೆಂಗಳೂರು: ಮನೆಯಲ್ಲಿ ಸಂಭ್ರಮದ ವಾತಾವರಣ, ಮದುವೆಗೆ ಹೋಗಲು ಎಲ್ಲರೂ ರೆಡಿಯಾಗುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತಂದೆಯ ಒಂದು ಸಣ್ಣ ಮರೆವು ಕಂದಮ್ಮನ ಪ್ರಾಣವನ್ನೇ ಬಲಿ ಪಡೆದಿದೆ. ಈ ಮನಕಲಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

​ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಪುತ್ರ ಚಿರಾಗ್ ಮೃತ ದುರ್ದೈವಿ. ಭಾನುವಾರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಇಡೀ ಕುಟುಂಬ ಸಿದ್ಧತೆಯಲ್ಲಿತ್ತು. ತಾಯಿ ಮಗುವನ್ನು ಸ್ನಾನ ಮಾಡಿಸಿ, ಅಂದವಾಗಿ ರೆಡಿ ಮಾಡಿ ಆಟವಾಡಲು ಬಿಟ್ಟಿದ್ದರು.

​ತಂದೆ ಅಣ್ಣಯ್ಯ ಅವರು ಮನೆಯ ಹೊರಗಡೆ ಕಾರ್ ವಾಶ್ ಮಾಡುತ್ತಿದ್ದರು.​ನೀರಿಗಾಗಿ ಸಂಪ್‌ನ ಮುಚ್ಚಳ ತೆಗೆದಿದ್ದ ಅವರು, ಕೆಲಸ ಮುಗಿದ ನಂತರ ಆತುರದಲ್ಲಿ ಮುಚ್ಚಳ ಮುಚ್ಚುವುದನ್ನು ಮರೆತು ಮನೆ ಒಳಗೆ ಹೋಗಿದ್ದಾರೆ.​ಆಟವಾಡುತ್ತಾ ಬಂದ ಮಗು ಚಿರಾಗ್, ಆಕಸ್ಮಿಕವಾಗಿ ತೆರೆದಿದ್ದ ಸಂಪ್‌ಗೆ ಬಿದ್ದಿದ್ದಾನೆ.
​ಕೆಲ ಹೊತ್ತಿನ ಬಳಿಕ ಮಗು ಕಾಣದಿದ್ದಾಗ ಹುಡುಕಾಡಿದ ಪೋಷಕರಿಗೆ ಸಂಪ್‌ನಲ್ಲಿ ಮಗುವಿನ ಶವ ಕಂಡುಬಂದಿದೆ.
​ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮಗುವಿನ ಸಾವಿನಿಂದಾಗಿ ಆಕ್ರಂದನ ಮುಗಿಲು ಮುಟ್ಟಿದೆ.


Share It

You cannot copy content of this page