ಸುದ್ದಿ

ಮಗಳು ಮದುವೆಯಾದರೆ ಹಣ ಕೊಡಲ್ಲ ಎಂದು ಕೊಲೆಗೆ ಯತ್ನಿಸಿದ ತಂದೆ; ಕಾಲೇಜು ಮುಂಭಾಗವೇ ಉಪನ್ಯಾಸಕಿಗೆ ಚಾಕು ಇರಿತ!

Share It

​ಬೆಂಗಳೂರು: ಮಗಳಿಗೆ ಮದುವೆಯಾದರೆ ಕೊಡಲ್ಲ ಎಂದು ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಲು ಯತ್ನಿಸಿದ ಪಾಪಿ ತಂದೆಯೊಬ್ಬನನ್ನು ರಾಜಾನುಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ದೇವನಹಳ್ಳಿಯ ವಿಜಯಪುರ ನಿವಾಸಿ ನಾಗೇಂದ್ರ (46) ಬಂಧಿತ ಆರೋಪಿ. ಈತ ರಾಜಾನುಕುಂಟೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತನ್ನ ಮಗಳು ಲಕ್ಷ್ಮಿ (25) ಎಂಬಾಕೆಯ ಮೇಲೆ ಜುಲೈ 25ರಂದು ಕಾಲೇಜಿನ ಮುಂಭಾಗದಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದ.

​ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕುಟುಂಬ:

​ಆಟೋ ಚಾಲಕನಾಗಿದ್ದ ಆರೋಪಿ ನಾಗೇಂದ್ರ, ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಿಜಯಪುರದಲ್ಲಿ ವಾಸವಾಗಿದ್ದ. ಆದರೆ ಈತ ತೀವ್ರ ದುಶ್ಚಟಗಳಿಗೆ ದಾಸನಾಗಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಬೇಸತ್ತ ಪತ್ನಿ ಮತ್ತು ಮಕ್ಕಳು ಈತನಿಂದ ದೂರವಾಗಿ ಯಲಹಂಕ ಬಳಿ ಪ್ರತ್ಯೇಕವಾಗಿ ನೆಲೆಸಿದ್ದರು. ಮಗಳು ಲಕ್ಷ್ಮಿ ಕಾಲೇಜಿನಲ್ಲಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದರು.

​ಮದುವೆ ನಿಶ್ಚಯವಾಗಿದ್ದೇ ಕೊಲೆ ಯತ್ನಕ್ಕೆ ಕಾರಣ!

​ಇತ್ತೀಚೆಗೆ ಲಕ್ಷ್ಮಿಗೆ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಈ ವಿಷಯ ತಿಳಿದ ಆರೋಪಿ ನಾಗೇಂದ್ರ, “ಮಗಳಿಗೆ ಮದುವೆಯಾದರೆ ಆಕೆಯಿಂದ ತನಗೆ ಬರುತ್ತಿದ್ದ ಹಣ ನಿಂತುಹೋಗುತ್ತದೆ, ಜೊತೆಗೆ ಎಷ್ಟೇ ಕೇಳಿಕೊಂಡರೂ ಪತ್ನಿ-ಮಕ್ಕಳು ತನ್ನ ಬಳಿ ಹಿಂತಿರುಗಿ ಬರುತ್ತಿಲ್ಲ” ಎಂದು ಆಕ್ರೋಶಗೊಂಡಿದ್ದ.

​ಇದೇ ಕೋಪದಲ್ಲಿ ಜುಲೈ 25ರ ಮಧ್ಯಾಹ್ನ ಸುಮಾರು 3 ಗಂಟೆಗೆ ಲಕ್ಷ್ಮಿ ಕೆಲಸ ಮಾಡುತ್ತಿದ್ದ ಕಾಲೇಜಿನ ಬಳಿ ಬಂದ ಆರೋಪಿ, ಆಕೆಯೊಂದಿಗೆ ಗಲಾಟೆ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ತಾನು ತಂದಿದ್ದ ಚಾಕುವಿನಿಂದ ಲಕ್ಷ್ಮಿಯ ಹೊಟ್ಟೆ ಹಾಗೂ ದೇಹದ ವಿವಿಧ ಭಾಗಗಳಿಗೆ ಭೀಕರವಾಗಿ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು ಆರೋಪಿ ನಾಗೇಂದ್ರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


Share It

You cannot copy content of this page