’ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿ 498ಎ ದುರ್ಬಳಕೆಯಾಗುತ್ತಿದೆ’ – ಹೈಕೋರ್ಟ್ ಕಳವಳ
ಬೆಂಗಳೂರು: ಮೊದಲ ಪತಿಯಿಂದ ವಿಚ್ಛೇದನ ಪಡೆಯದೇ ಎರಡನೇ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದ ಪತ್ನಿಗೆ ಮಾಸಿಕ 5,000 ರೂಪಾಯಿ ಜೀವನಾಂಶ ಪಾವತಿಸುವಂತೆ ಅಧೀನ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹೊಸಕೋಟೆ ಮೂಲದ ರವಿ (ಹೆಸರು ಬದಲಾಯಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ. ಜೊತೆಗೆ, ಪ್ರಕರಣದ ಪ್ರತಿವಾದಿಯಾದ ಪತ್ನಿ ಬೃಂದಾಗೆ (ಹೆಸರು ಬದಲಾಯಿಸಲಾಗಿದೆ) ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರ (ರವಿ) ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿ, “ಅರ್ಜಿದಾರರ ಪತ್ನಿಯು ಕಾನೂನಾತ್ಮಕವಾಗಿ ವಿಚ್ಛೇದನ ನೀಡದೇ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಮೊದಲ ಪತಿಯಿಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶ ಪಡೆಯುತ್ತಾ, ಎರಡನೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ” ಎಂದು ಆಚರಣೆಯ ಫೋಟೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದರು.
ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, “ಅಂದರೆ, ಮೊದಲ ಪತಿಯಿಂದ ಪಡೆಯುವ ಜೀವನಾಂಶದ ಹಣವನ್ನು ಎರಡನೇ ಪತಿಯೊಂದಿಗಿನ ಸಂಭ್ರಮಾಚರಣೆಗೆ ಬಳಸಲಾಗುತ್ತಿದೆಯೇ?” ಎಂದು ಅಚ್ಚರಿ ವ್ಯಕ್ತಪಡಿಸಿದರು.
ಕೇವಲ ಹಣ ವಸೂಲಿ ಮಾಡುವ ಉದ್ದೇಶದಿಂದ ಪತಿಯ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದ್ದು, ಇದು ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ. ಆದ್ದರಿಂದ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರ ವಕೀಲರು ಮನವಿ ಮಾಡಿದರು.
”ಪ್ರಸ್ತುತ ದಿನಗಳಲ್ಲಿ ಕೇವಲ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ಮಾತ್ರವಲ್ಲದೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A (ಗಂಡ ಹಾಗೂ ಆತನ ಸಂಬಂಧಿಕರಿಂದ ನಡೆಯುವ ದೌರ್ಜನ್ಯ ತಡೆ ಕಾನೂನು) ಕೂಡ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ.” ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿತು.
ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಜೀವನಾಂಶ ನೀಡಬೇಕೆಂಬ ಅಧೀನ ನ್ಯಾಯಾಲಯದ ಆದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆಯಾಜ್ಞೆ ನೀಡಿ ಆದೇಶಿಸಿತು.