“ಪೋಲಿಸರ ಈ ನಡೆ ನಿಜಕ್ಕೂ ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿಗೆ ಬೆದರಿಕೆಯಾಗಿದ್ದು, ಸರ್ಕಾರ ಅಕ್ರಮ ವಲಸಿಗರಿಗೆ ಸಹಕರಿಸುವುದು ಹಾಗೂ ಓಲೈಕೆ ಮಾಡುವುದನ್ನು ನಿಲ್ಲಿಸಬೇಕು” ಹೈಕೋರ್ಟ್
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳ ದೂರು ಆಧರಿಸಿ ದೂರುದಾರ/ಸಾಮಾಜಿಕ ಕಾರ್ಯಕರ್ತರ ಮೇಲೆಯೇ ಎಫ್‌ಐಆರ್ ದಾಖಲಿಸಿದ ಪೊಲೀಸರ ಹಾಗೂ ಸರ್ಕಾರದ ನಡೆಯನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
“ಪೋಲಿಸರ ಈ ನಡೆ ನಿಜಕ್ಕೂ ರಾಷ್ಟ್ರದ ಭದ್ರತೆ ಮತ್ತು ಹಿತಾಸಕ್ತಿಗೆ ಬೆದರಿಕೆಯಾಗಿದ್ದು, ಸರ್ಕಾರ ಅಕ್ರಮ ವಲಸಿಗರಿಗೆ ಸಹಕರಿಸುವುದು ಹಾಗೂ ಓಲೈಕೆ ಮಾಡುವುದನ್ನು ನಿಲ್ಲಿಸಬೇಕು” ಎಂದು ಹೈಕೋರ್ಟ್ ಖಡಕ್ ಆಗಿ ತಿಳಿಸಿದೆ.
ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆಗಳು ನೀಡಿದ ದೂರು ಆಧರಿಸಿ ತಮ್ಮ ವಿರುದ್ಧ ವರ್ತೂರು ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಮಲ್ಲಸಂದ್ರದ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಟಿ. ನಾಗೇಂದ್ರಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪೊಲೀಸರ ಮತ್ತು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು ಮತ್ತು ಮುಂದಿನ ವಿಚಾರಣೆಯವರೆಗೆ ಎಫ್ಐಆರ್ ಗೆ ತಡೆಯಾಜ್ಞೆ ನೀಡಿ ಆದೇಶಿಸಿತು.
ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿ ಎಂದು ನ್ಯಾಯಾಲಯ ನಿರ್ದೇಶಿಸುತ್ತಿದ್ದರೆ, ಪೊಲೀಸರು ಅಕ್ರಮ ವಲಸಿಗರ ದೂರು ಸ್ವೀಕರಿಸಿ ನಮ್ಮ ದೇಶದ ಪ್ರಜೆಗಳ ಮೇಲೆಯೇ ಎಫ್‌ಐಆರ್ ದಾಖಲಿಸುತ್ತೀರಾ?” ಎಂದು ಹೈಕೋರ್ಟ್ ಸರ್ಕಾರಿ ಅಭಿಯೋಜಕರನ್ನು ತೀವ್ರವಾಗಿ ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಒದಗಿಸಲು ಸರ್ಕಾರ ಹಾಗೂ ಪೊಲೀಸರಿಗೆ ಸೂಚಿಸಿರುವ ಪೀಠವು, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯನ್ನು (FRRO) ಪ್ರತಿವಾದಿಯನ್ನಾಗಿ ಮಾಡಿ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಹೊಸಸಿದ್ದಾಪುರದಲ್ಲಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆ ನಸೀನಾ ಮತ್ತು ಕೊಡತಿ ಗ್ರಾಮದ ಕಾರ್ಮಿಕರ ಗುಡಿಸಲಿನಲ್ಲಿ ವಾಸವಿರುವ ಮೊಹಮ್ಮದ್ ಶೈದುಲ್ಲಾ ಇಸ್ಲಾಂ ಎಂಬುವವರು ನೀಡಿದ ದೂರು ಆಧರಿಸಿ ಕ್ರಮವಾಗಿ ಬೆಳ್ಳಂದೂರು ಮತ್ತು ವರ್ತೂರು ಠಾಣಾ ಪೊಲೀಸರು, ಮಹಿಳೆಯ ಗೌರವಕ್ಕೆ ಧಕ್ಕೆ ತಂದ, ಹಲ್ಲೆ ನಡೆಸಿದ, ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಇನ್ನಿತರ ಆರೋಪಗಳ ಮೇಲೆ ಅರ್ಜಿದಾರರ ಮೇಲೆ ಪ್ರತ್ಯೇಕ ಎರಡು ಎಫ್‌ಐಆರ್ ದಾಖಲಿಸಿದ್ದರು. ಅವುಗಳನ್ನು ರದುಪಡಿಸುವಂತೆ ಕೋರಿ ನಾಗೇಂದ್ರಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.