ತುಮಕೂರು: ಅಪ್ರಾಪ್ತ ಮಗ ಬೈಕ್ ಚಲಾಯಿಸಿ ಅಪಘಾತ ಎಸಗಿದ್ದ ಕಾರಣಕ್ಕೆ ತಂದೆಗೆ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್‌ಸಿ ನ್ಯಾಯಾಲಯ ₹30,000 ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಅಕ್ಟೋಬರ್ 31ರಂದು ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ತಂದೆ ನೀಡಿದ್ದರು. ಆತ ರಾತ್ರಿ ವೇಳೆ ತುಮಕೂರಿನಿಂದ ಬೈಕ್ ಚಾಲಾಯಿಸಿಕೊಂಡು ಬರುವಾಗ ಗುಬ್ಬಿ ಬೈಪಾಸ್‌ನ ಸಿಐಟಿ ಕಾಲೇಜು ಹಿಂಭಾಗ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದ್ದ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ 1 ದಿನ ಜೈಲು ಶಿಕ್ಷೆ ಮತ್ತು ₹30,000 ರು. ದಂಡ ವಿಧಿಸಿ ತೀರ್ಪು ನೀಡಿದೆ.