ಬೆಂಗಳೂರು: ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಗಳ ಪರೀಕ್ಷೆಗೆ ಇರುವ 125 ಅಂಕಗಳನ್ನು 100ಕ್ಕೆ ಇಳಿಸಲು ಹೊರಟಿರುವ ಸರ್ಕಾರದ ಕ್ರಮ ಕನ್ನಡ ವಿರೋಧಿ ನಿರ್ಧಾರವಾಗಿದೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕೆಂದು ಸಾಹಿತಿ ಬರಗೂರು ರಾಮಚಂದ್ರಪ್ಪ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ ಅವರಿಗೆ ಪತ್ರ ಬರೆದಿರುವ ಅವರು
ಕನ್ನಡ ಸೇರಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕಗಳನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿರುವ ಸುದ್ದಿಯಿಂದ ಅಚ್ಚರಿಯಾಗಿದೆ. ಈ ನಿರ್ಧಾರ ತೀವ್ರ ಖಂಡನೀಯ ಎಂದು ಹೇಳಿದ್ದಾರೆ.
100 ಅಂಕಗಳಿಗೆ ನಿಗದಿ ಮಾಡುವುದು ಯಾವ ತರ್ಕ? ಇದರ ಹಿಂದೆ ತರ್ಕವೂ ಇಲ್ಲ, ತತ್ವವೂ ಇಲ್ಲ. ಇದು ಕನ್ನಡವೂ ಸೇರಿದಂತೆ ಮಾತೃಭಾಷೆಗಳ ಮಹತ್ವ ಕುಗ್ಗಿಸುವ ಕೆಲಸ. ಕನ್ನಡ ವಿರೋಧಿ ನಿರ್ಧಾರ. ತಾವು ಕೂಡಲೇ ಈ ನಿರ್ಧಾರವನ್ನು ವಾಪಸ್ ಪಾಡಯಲು ಕ್ರಮ ಕೈಗೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.