ಬೆಂಗಳೂರು: ಬಿಎಂಟಿಸಿ ಬಸ್ ದರ, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಈಗ ಆಟೋ ಪ್ರಯಾಣ ದರ ಹೆಚ್ಚಳವಾಗಿದೆ. ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅದರಂತೆ ಆಗಸ್ಟ್ 1 ರಿಂದ ಈ ದರ ಜಾರಿಯಾಗಲಿದೆ. ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಏರಿಸಲಾಗಿದೆ.
ಹಾಗೆಯೇ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.