ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಇಷ್ಟೆಲ್ಲಾ ಅವಾಂತರಕ್ಕೆ ಕಾರಣಕರ್ತರಾದ ಎಚ್.ಆಂಜನೇಯರನ್ನು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಬೇಕು
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮತ್ತು ಕೊರಮ ಕೊರವ ಜನಾಂಗದ ಬೆಂಗಳೂರು ಜಿಲ್ಲಾಧ್ಯಕ್ಷೆ ಪ್ರಭಾವತಿ ಮೇಲೆ ಹಲ್ಲೆ ಮಾಡಿರುವ ಬಿಜೆಪಿ ವಕ್ತಾರ ಸೇರಿದಂತೆ ಏಳು ಜನ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ ಆಗ್ರಹಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಭವನದಲ್ಲಿ ಜು.7ರಂದು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ನಡೆಯುತ್ತಿದ್ದ ಅಲೆಮಾರಿಗಳ ರಾಜ್ಯಮಟ್ಟ ಸಮಾವೇಶ ನಡೆಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಆರೋಪಿಗಳಾದ ಲೋಹಿತಾಕ್ಷ, ವೀರೇಶ, ಶಿವ, ಲೋಕೇಶ, ಶಾಂತ ಕುಮಾರ್, ಬಸವರಾಜು ಮತ್ತು ಸುಭಾಶ್ ಚವಾಣ ಇವರುಗಳು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಮತ್ತು ಮುಖಂಡೆ ಪ್ರಭಾವತಿ ಇವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮನಬಂದತೆ ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಪೂರ್ವಭಾವಿ ಸಭೆಗೆ ಆಂಜನೇಯ ರಾಜ್ಯದ ಎಲ್ಲ ಅಲೆಮಾರಿ ಮುಖಂಡರನ್ನು ಸಭೆಗೆ ಬರಬೇಕೆಂದು ವೀಡಿಯೋ ಮೂಲಕ ಕರೆ ನೀಡಿದ್ದರು. ಸಭೆಗೆ ಆಗಮಿಸಿದ್ದ ಅಧ್ಯಕ್ಷೆ ಪಲ್ಲವಿ ಅವರನ್ನು ಅಲೆಮಾರಿ ಜನಾಂಗದ ಕೆಲವು ದಳ್ಳಾಳಿಗಳು ಇದು ಕೇವಲ 49 ಜಾತಿಗಳಿಗಾಗಿ ನಡೆಯುವ ಸಭೆ ನೀವ್ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೇ, ಒಮ್ಮೆಲೆ ಅವರ ಮೇಲೆ ಮುಗಿಬಿದ್ದಿದ್ದಾರೆ. ರಕ್ಷಣೆಗೆ ಧಾವಿಸಿದ ಪ್ರಭಾವತಿ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆಂಜನೇಯ ಅಧ್ಯಕ್ಷೆ ಪಲ್ಲವಿ ಅವರನ್ನು ಸಭೆಯಿಂದ ಹೊರನಡೆಯಲು ಸೂಚಿಸಿ ಅಪಮಾನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿ ಮಾಡಿದ್ದಾರೆ. ಇದೆಲ್ಲವೂ ಪೂರ್ವ ಪಿತೂರಿಯಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಇಷ್ಟೆಲ್ಲಾ ಅವಾಂತರಕ್ಕೆ ಕಾರಣಕರ್ತರಾದ ಎಚ್.ಆಂಜನೇಯರನ್ನು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಶಿವಾನಂದ ಭಜಂತ್ರಿ ಎಚ್ಚರಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ರವಿ ಕುಮಾರ್, ಪ್ರಭಾವತಿ, ಗೋಪಾಲ್ ತಿರುಮಲಾಪುರ, ಈರಣ್ಣ ಭಜಂತ್ರಿ, ಡಾ.ಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.