ನವದೆಹಲಿ: ಪತಿ -ಪತ್ನಿ ನಡುವಿನ ಫೋನ್ ಸಂಭಾಷಣೆಯು ವಿಚ್ಛೇದನ ಪ್ರಕರಣದಲ್ಲಿ ಸ್ವೀಕಾರಾರ್ಹ ಸಾಕ್ಷಿಯಾಗಿ ಪರಿಗಣಿಸಲ್ಪಡುತ್ತದೆ ಎಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಸಂಗಾತಿಯ ಫೋನ್ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ, ಇದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿ.ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ನೇತೃತ್ವದ ದ್ವಿಸದಸ್ಯ ಪೀಠ ಮಹತ್ವದ ಈ ಆದೇಶ ನೀಡಿದೆ. ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್, ವಿಚ್ಛೇದನ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪತಿ-ಪತ್ನಿ ಫೋನ್ ರೆಕಾರ್ಡಿಂಗ್ ವಿಚ್ಛೇದನಕ್ಕೆ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದು ಗೌಪ್ಯತೆ ಉಲ್ಲಂಘನೆ ಎಂದು ತೀರ್ಪು ನೀಡಿತ್ತು.
ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ, ರೆಕಾರ್ಡಿಂಗ್ ಕೂಡ ಡೈವೋರ್ಸ್ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಬಹುದು ಎಂದು ಹೇಳಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.
ಏನಿದು ಪ್ರಕರಣ?: ಈ ಹಿಂದೆ ಭಟಿಂಡಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಈ ವಿಷಯವು ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13ರ ಅಡಿಯಲ್ಲಿ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡಿತ್ತು. ಪತಿ ತನ್ನ ಪತ್ನಿಯ ಮೇಲೆ ಕ್ರೌರ್ಯದ ಆರೋಪ ಹೊರಿಸಿದ್ದರು. ಅವರು ತನ್ನ ಆರೋಪವನ್ನು ಸಾಬೀತುಪಡಿಸಲು ರೆಕಾರ್ಡ್ ಮಾಡಿದ ಫೋನ್ ಸಂಭಾಷಣೆಗಳನ್ನು ಸಾಕ್ಷಿಯಾಗಿ ಒದಗಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು ಈ ರೆಕಾರ್ಡಿಂಗ್‌ಗಳಿರುವ ಸಿಡಿಯನ್ನು ಸಾಕ್ಷಿಯಾಗಿ ಪರಿಗಣಿಸಲು ಅನುಮತಿಸಿತ್ತು. ತನ್ನ ಗಂಡ ರಹಸ್ಯವಾಗಿ ಕಾಲ್ ರೆಕಾರ್ಡ್ ಮಾಡಿದ್ದಾನೆ. ಅದನ್ನು ಪರಿಗಣಿಸಬಾರದು ಎಂದು ಪತ್ನಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿದ್ದರು.