ಬೆಂಗಳೂರು: ನಗರದ ತುಮಕೂರು ರಸ್ತೆಯ ನಾಗಸಂದ್ರದ ಬಳಿಯ ಟೋಲ್ ಪ್ಲಾಜಾದಲ್ಲಿ ಅನಧಿಕೃತವಾಗಿ ಟೋಲ್ ಸಂಗ್ರಹಿಸಲಾಗುತ್ತಿರುವುದನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಮೇಲಿನಂತೆ ಸೂಚನೆ ನೀಡಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದೆ. ವಿ
ವಿಚಾರಣೆ ವೇಳೆ ಸ್ವತಃ ಅರ್ಜಿದಾರರು ವಾದ ಮಂಡಿಸಿ. ರಾಷ್ಟ್ರೀಯ ಹೆದ್ದಾರಿಯಾಗಿರುವ ತುಮಕೂರು ರಸ್ತೆಯ ನಾಗಸಂದ್ರ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಿಸುವ ಒಪ್ಪಂದ ಅವಧಿ 2021ರಲ್ಲಿ ಮುಗಿದಿದೆ. ಹೀಗಿದ್ದರೂ ಕರ್ನಾಟಕ ರಾಜ್ಯದ ಸುಮಾರು 20 ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆಯ ಮೂಲಕ ಹಾದು ಹೋಗುವ ಪ್ರತಿಯೊಂದು ವಾಹನಕ್ಕೂ ಫಾಸ್ಟ್ ಟ್ಯಾಗ್ ಗಳ ಮೂಲಕ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದರು.
ಪ್ರತಿನಿತ್ಯ ಲಕ್ಷಾಂತರ ಹಣವನ್ನು ಟೋಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ.ಆದ್ದರಿಂದ ಟೋಲ್ ಸಂಗ್ರಹಕ್ಕೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರ ಮತ್ತು ಎನ್‌ಎಚ್‌ಎಐಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.