ಸುದ್ದಿ

ಧರ್ಮಸ್ಥಳ ಪ್ರಕರಣI ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಎಐಎಂಎಸ್ಎಸ್ ಸಂಘಟನೆಯಿಂದ ಸರ್ಕಾರಕ್ಕೆ ಪತ್ರ

Share It

ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ನೂರಾರು ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು, ಘೋರ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿವೆ. ಈ ಅಪರಾಧ ಕೃತ್ಯಗಳ ಕುರಿತು ಸಮಗ್ರ ತನಿಖೆಯಾಗಲಿ’

ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ  ಎನ್ನಲಾದ ಬಾಲಕಿಯರ, ಮಹಿಳೆಯರ ಕೊಲೆ, ಅತ್ಯಾಚಾರದಂತಹ  ಆಘಾತಕಾರಿ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಕೋರಿ ‘ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ'(ಎಐಎಂಎಸ್ಎಸ್)ಯಿಂದ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಇವರ ಮುಖೇನ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಮನವಿ ಪತ್ರ ಸಲ್ಲಿಸಲಾಯಿತು.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಆನೇಕಾನೇಕ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು, ಘೋರ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿ ಜನರಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ.

ಅತ್ಯಾಚಾರಕ್ಕೊಳಗಾದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರ, ಮಹಿಳೆಯರ ಶವಗಳನ್ನು 1995 ರಿಂದ 2014ರ ನಡುವೆ ಅಲ್ಲಿ ಸುತ್ತಮುತ್ತ ಹೂತಿದ್ದೇನೆ ಎಂದು ಧರ್ಮಸ್ಥಳದ ಮಾಜಿ ಪೌರಕಾರ್ಮಿಕ ಎನ್ನಲಾದ ವ್ಯಕ್ತಿಯ ದೂರನ್ನು ಆಧರಿಸಿ ಎಫ್.ಐ.ಆರ್. ಮಾಡಲಾಗಿದೆ. ಅವರು ಹೂತಿರುವ ಬಹುಪಾಲು ಶವಗಳು ಬಾಲಕಿಯರು ಮತ್ತು ಮಹಿಳೆಯರದ್ದು ಎಂಬುದು ಬಹಳ ಅಘಾತಕಾರಿ ವಿಷಯವಾಗಿದೆ.

ಅಲ್ಲದೆ ಈ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿವೆ.ಇನ್ನೂ ಈ ಪ್ರಕರಣಗಳ ವಿರುದ್ಧ ಹಲವಾರು ವರ್ಷಗಳಿಂದ ಪ್ರತಿರೋಧಗಳು, ಹೋರಾಟಗಳು ನಡೆಯುತ್ತಲೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗಷ್ಟೆ ಈ ನೂರಾರು ಶವಗಳ ಸಮಾಧಿ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ಸಮರ್ಥ (ಎಸ್ಐಟಿ) ವಿಶೇಷ ತನಿಖಾ ತಂಡ ನೇಮಿಸಿದೆ.

ಹಾಗಾಗಿ ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಈ ನೂರಾರು ಸಾವುಗಳ ಕುರಿತು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ತಪ್ಪಿತಸ್ಥರು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಎಷ್ಟೇ ಪ್ರಭಾವಿ ವಲಯದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೂ ಎಲ್ಲಾ ಸಾಕ್ಷಿಗಳಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ಆತಂಕ. ನೋವು, ಆಕ್ರೋಶದಲ್ಲಿರುವ ಜನತೆಗೆ ಭರವಸೆ ನೀಡಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಈ ಮನವಿ ಪತ್ರದ ಮುಖೇನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತದೆ.

ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಎಐಎಂಎಸ್ಎಸ್ ಸಂಘಟನೆಯ ಎ.ಶಾಂತ, ರಾಜ್ಯ ಕಚೇರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಸಂಚಾಲಕರು, ಅನಸೂಯ ಹಾಗೂ ವಕೀಲರಾದ ಪಿ. ರಾಜೇಶ್ವರಿ ಉಪಸ್ಥಿತರಿದ್ದರು.


Share It

You cannot copy content of this page