ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 2023-24ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಿಸಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಹಕಾರ ಸಂಘಗಳ ನಿಬಂಧಕರ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಸಲ್ಲಿಸಿದ್ದ ರಿಟ್ ಅರ್ಜಿಯ ಮಧ್ಯಂತರ ಮನವಿ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
ವಿಚಾರಣಾಧಿಕಾರಿ ನೇಮಿಸಿರುವ ಬಗೆಗಿನ ನಿಯಮಗಳು ಹಾಗೂ ಪ್ರಕರಣದ ದಾಖಲೆಗಳ ಆಧಾರದ ಮೇಲೆ ವಿಸ್ತ್ರತವಾಗಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಹಾಗಾಗಿ, ಆದೇಶಕ್ಕೆ ತಡೆ ನೀಡಲು ಇದು ಸೂಕ್ತವಾದ ಹಂತವಲ್ಲ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 20250 ಜೂನ್ 29ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ 2023-24ನೇ ಸಾಲಿನ ಕಸಾಪ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ರದ್ದುಪಡಿಸಿ ಜೂನ್ 27ರಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದರು.
2023-24ನೇ ಸಾಲಿನಲ್ಲಿ ಪರಿಷತ್‌ಗೆ ಸಂಗ್ರಹವಾಗಿರುವ ಆದಾಯ, ಅನುದಾನದಲ್ಲಿ ಆಗಿರುವ ಅವ್ಯವಹಾರ ಮತ್ತಿತರ ವಿಷಯಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಕ ಮಾಡಿ 2025ರ ಜೂನ್ 30ರಂದು ಅದೇಶ ಹೊರಡಿಸಲಾಗಿತ್ತು.