ಬೆಂಗಳೂರು: ಭೂ ಸ್ವಾಧೀನಕ್ಕೆ ಒಳಗಾದ
ತಮ್ಮ ಜಮೀನಿಗೆ ಪರಿಹಾರ ಪಡೆದ ಬಳಿಕವೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಎಂಟನೇ ಬಾರಿಗೆ ಪುನಃ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕುಟುಂಬವೊಂದರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂದು ಪರಿಗಣಿಸಿ ಅರ್ಜಿದಾರರಿಗೆ ₹10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರು ನಗರದ ಭುವನೇಶ್ವರಿ ನಗರದ ನಿವಾಸಿಗಳಾದ ಗಂಗಮ್ಮ ಮತ್ತು ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಲ್ಲದೇ, ಆದೇಶ ಪ್ರಕಟವಾದ ನಾಲ್ಕು ವಾರಗಳಲ್ಲಿ 10 ಲಕ್ಷ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಧಿಕಾರಕ್ಕೆ ಪಾವತಿಸುವಂತೆ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದೆ. ಈವರೆಗೂ ಎಂಟು ಬಾರಿ ಕಾನೂನು ಹೊರಾಟ ನಡೆದಿದೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ. ಆದ್ದರಿಂದ ಅರ್ಜಿದಾರರು ತಪ್ಪಿತಸ್ಥರಾಗಿದ್ದು, ಶುದ್ಧಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಲಯಕ್ಕೆ ಬರುವವರು ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರ್ಯ ಕಳಂಕಗೊಳಿಸಿದಂತಾಗಲಿದೆ. ನ್ಯಾಯ ಕಳಂಕರಹಿತವಾಗಿರಬೇಕಾದರೆ ದೃಢವಾದ ಖಂಡನೆಯೊಂದಿಗೆ ಆದೇಶಿಸಬೇಕು. ಜತೆಗೆ, ಈ ಆದೇಶಗಳು ಇತರರಿಗೆ ಎಚ್ಚರಿಕೆ ನೀಡುವಂತಾಗಬೇಕು ಹಾಗಾಗಿ ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳತಿಳಿಸಿದೆ.ದಂಡದ ಮೂಲಕ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ: ವೆಂಕಟೇಶ್ ಭೋವಿ ಮತ್ತು
ಹನುಮಂತ ಭೋವಿ ಎಂಬುವವರು ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 26ರಲ್ಲಿದ್ದ ಜಮೀನನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದರು. ಬಳಿಕ ಈ ಜಮೀನನ್ನು ಸಾಗುವಳಿ ಅಡಿಯಲ್ಲಿ ಅರ್ಜಿದಾರರ ಹೆಸರಿಗೆ ಮಂಜೂರು ಮಾಡಲಾಗಿತ್ತು. ಈ ಜಮೀನು ಇಬ್ಬರ ಹೆಸರಿಗೆ ಬದಲಾವಣೆಗೊಂಡಿದ್ದವು. ಉದ್ದೇಶಿತ ಜಮೀನನ್ನು ಮೆಸಸ್ ಗವಿಪುರಂ ಎಕ್ಸ್‌ಟೆನ್ನನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಯಿಂದ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವುದಾಗಿ 1986ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 1987ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.
ಅದರಂತೆ ಪ್ರತಿ ಎಕರೆಗೆ 65 ಸಾವಿರ ರೂ ಗಳ ಮೊತ್ತ ಮತ್ತು 15 ಸಾವಿರ ರೂ ಗಳಂತೆ ಬಡ್ಡಿ ಸೇರಿಸಿ ಪರಿಹಾರವನ್ನು ನೀಡಲಾಗಿತ್ತು. ಈ ಪರಿಹಾರ ಮೊತ್ತವನ್ನು 1987ರಲ್ಲಿ ಭೂಮಾಲೀಕರ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಈ ನಡುವೆ ವೆಂಕಟೇಶ್ ಭೋವಿ ಮತ್ತು ಹನುಮಂತ ಭೋವಿ ಮೃತಪಟ್ಟಿದ್ದರು.
ಇದಾದ ಬಳಿಕ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಬೇಕು ಎಂದು ಕೋರಿ ಹನುಮಂತ ಭೋವಿ ಮತ್ತು ವೆಂಕಟಟೇಶ್ ಭೋವಿ ಅವರ ವಾರಸುದಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. 1992ರಲ್ಲಿ ಜಮೀನು ಸ್ವಾಧೀನದಿಂದ ಕೈಬಿಡುವಂತೆ ಕೋರಿ ವಿಶೇಷ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಯಂತೆ ವಿಶೇಷ ಜಿಲ್ಲಾಧಿಕಾರಿ 1993ರಲ್ಲಿ ಉದ್ದೇಶಿತ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಶಿಫಾರಸ್ಸು ಮಾಡಿದ್ದರು. ಜತೆಗೆ, ಈ ಸಂಬಂಧ ಅಧಿಸೂಚನೆ ಹೊರಡಿಸಲು ಸೂಚನೆ ನೀಡಿದ್ದರು.
ಆದರೆ, ಆ ಶಿಫಾರಸು ಜಾರಿಯಾಗಿರಲಿಲ್ಲ.
ಭೂ ಸ್ವಾಧೀನ ಕೈಬಿಡುವಂತೆ 1993ರಿಂದ 20205ರವರೆಗೂ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಉದ್ದೇಶಿದ ಜಮೀನನ್ನು 1986ರಲ್ಲಿ ಅಧಿಸೂಚನೆಯಿಂದ ಕೈಬಿಟ್ಟಿರುವುದಾಗಿ ತಿಳಿಸಿದ್ದ ಅರ್ಜಿದಾರರು ನಿರಾಕ್ಷೇಪಣಾ ಪತ್ರಕ್ಕಾಗಿ ಮನವಿ ಮಾಡಿದ್ದರು.
ಅರ್ಜಿದಾರರಿಗೆ ಸಂಬಂಧಿಸಿದಂತಹ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಸಂಬಂಧ 1993ರಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದರು. ಆದರೆ, ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿಲ್ಲ. ಹೀಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಮೆಸಸ್ ಗವಿಪುರಂ ಎಕ್ಸ್‌ಟೆನ್ನನ್ ಗೃಹ ನಿರ್ಮಾಣ ಸಹಕಾರ ಸಂಘದ ಪರ ವಕೀಲರು, “ಅರ್ಜಿದಾರರು ಎಂಟನೇ ಬಾರಿಗೆ ನ್ಯಾಯಾಲಯಕ್ಕೆ ಬಂದಿದ್ದಾರೆ. ಪ್ರತಿ ಅರ್ಜಿಯಲ್ಲಿ ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಏಕಸದಸ್ಯ ಪೀಠ, ವಿಭಾಗೀಯ ಪೀಠಗಳು ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿವೆ. ಇದೀಗ 1993ರ ಅಧಿಸೂಚನೆಯನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ಸ್ವಾಧೀನದಿಂದ ಕೈಬಿಡಲು ಶಿಫಾರಸು ಮಾಡಲಾಗಿದೆ ಎಂಬ ಆಧಾರದಲ್ಲಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿದಾರರ ಭೂಮಿಯೂ ಸೇರಿದಂತೆ ಇತರರ 16 ಎಕರೆ ಜಮೀನು 1987ರಲ್ಲಿಯೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆಧಿಸೂಚನೆ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಿಲ್ಲ. ಒಂದೇ ವಿಚಾರಕ್ಕಾಗಿ ಪದೇ ಪದೆ ನ್ಯಾಯಾಲಯವನ್ನು ಸಂಪರ್ಕಿಸುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.