ಹೈದರಾಬಾದ್‌ನಲ್ಲಿ ಬಾಡಿಗೆ ತಾಯ್ತನದ ಹೆಸರಿನಲ್ಲಿ ದೊಡ್ಡ ವಂಚನೆ ನಡೆದಿದ್ದು ವೈದ್ಯರೊಬ್ಬರು 35 ಲಕ್ಷ ರೂಪಾಯಿ ಪಡೆದು ಬೇರೆಯವರ ಮಗುವನ್ನು ಮತ್ತೊಂದು ದಂಪತಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಡಿಎನ್‌ಎ ಪರೀಕ್ಷೆಯಿಂದ ಈ ವಂಚನೆ ಬಯಲಾಗಿದ್ದು, ವೈದ್ಯರು ಮತ್ತು ಮಗುವಿನ ಜೈವಿಕ ಪೋಷಕರು ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ರಾಜಸ್ಥಾನದ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ನೀಡುವುದಾಗಿ ಹೇಳಿ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. 35 ಲಕ್ಷ ರೂಪಾಯಿ ಪಡೆದ ನಂತರ, ದಂಪತಿಗೆ ಖರೀದಿಸಿದ ಮಗುವನ್ನು ನೀಡಲಾಗಿದೆ, ಆದರೆ ಡಿಎನ್‌ಎ ಪರೀಕ್ಷೆಯಿಂದ ಅದು ಅವರ ಮಗುವಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ನೊಂದ ದಂಪತಿ ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಕೈಗೊಂಡ ಪೊಲೀಸರು, ಹೈದರಾಬಾದ್‌ನಲ್ಲಿ ಅಕ್ರಮವಾಗಿ ಬಾಡಿಗೆ ತಾಯ್ತನ ಹಾಗೂ ವೀರ್ಯ ಕಳ್ಳಸಾಗಣೆ ಮಾಡುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ವೈದ್ಯೆ ಡಾ. ಅಥಲೂರಿ ನಮ್ಮತಾ ಸೇರಿದಂತೆ ಒಟ್ಟು 8 ಜನರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.