ಸುದ್ದಿ

ಎಲೆಕ್ಟ್ರಿಕ್ ವಾಹನಕ್ಕೆ ಗುಣಮಟ್ಟದ ಬ್ಯಾಟರಿ‌ ನೀಡದ ಕಂಪನಿಗೆ ದಂಡ

Share It

ಧಾರವಾಡ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಗುಣಮಟ್ಟದ ಬ್ಯಾಟರಿ ನೀಡದ ಟ್ರಿಯೋ ಗ್ರೂಪ್ಸ್ ಪ್ಯೂವ‌ರ್ ಎನರ್ಜಿ ಪ್ರೈ.ಲಿ.ಕಂಪನಿಗೆ ದಂಡ ವಿಧಿಸಿದೆ. ಅಲ್ಲದೇ ಹೊಸ ಬ್ಯಾಟರಿ ಅಳವಡಿಸಿಕೊಡುವಂತೆ, ಬ್ಯಾಟರಿ ಅಳವಡಿಸಿಕೊಡದಿದ್ದಲ್ಲಿ ಪಾವತಿಸಿದ ಹಣವನ್ನು ವಾಪಸ್‌ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಹುಬ್ಬಳ್ಳಿ ಗೋಕುಲ ರಸ್ತೆಯ ನಿವಾಸಿ ರೋಹಿತ್ ಜೋಶಿ ಎನ್ನುವವರು 2021ರಲ್ಲಿ ₹91 ಸಾವಿರ ಕೊಟ್ಟು ಟ್ರೈಯೋ ಗ್ರೂಪ್ಸ್ ಪ್ಯೂವರ್ ಎನರ್ಜಿ ಕಂಪನಿಯಿಂದ ಎಲೆಕ್ನಿಕ್ ದ್ವಿಚಕ್ರ ವಾಹನ ಖರೀದಿಸಿದ್ದರು. ಬ್ಯಾಟರಿಯೂ 36 ತಿಂಗಳು, ವಾಹನದ ಬಿಡಿ ಭಾಗಗಳ ಮೇಲೆ ಒಂದು ವರ್ಷದ ವಾರಂಟಿ ಇತ್ತು. ಆದರೆ, ಕೆಲವೇ ದಿನಗಳಲ್ಲಿ ಬ್ಯಾಟರಿ ಚಾಜ್೯ ನಿಲ್ಲದ ಕಾರಣ ಸ್ಕೂಟರ್ ಪದೇ ಪದೇ ರಸ್ತೆಯ ಮಧ್ಯೆ ನಿಲ್ಲಲು ಪ್ರಾರಂಭಿಸಿತು. ಕಂಪನಿ ಹೇಳಿದಷ್ಟು ಮೈಲೇಜ್ ಕೊಡುತ್ತಿರಲಿಲ್ಲ. ಈ ವಿಷಯವನ್ನು ರೋಹಿತ್ ಅವರು ಕಂಪನಿಗೆ ತಿಳಿಸಿದ್ದರು. ಟ್ರೈಯೋ ಕಂಪನಿಯೂ ಬೇರೆ ಬ್ಯಾಟರಿ ಕೊಟ್ಟು ಮುಂದೆ ಅದರ ಬದಲಿಗೆ ಹೊಸ ಬ್ಯಾಟರಿ ಕೊಡುವುದಾಗಿ ತಿಳಿಸಿದ್ದರು. ನಂತರ ಕೊಟ್ಟಿರುವ ಹಳೆ ಬ್ಯಾಟರಿಯೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2024ರ ಮೇ 26ರಂದು ದೂರನ್ನು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಗ್ರಾಹಕರ ಆಯೋಗ ಟ್ರೈಯೋ ಕಂಪನಿಯಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ನಿರ್ಧರಿಸಿದರು. ಒಂದು ತಿಂಗಳ ಒಳಗಾಗಿ ಗ್ರಾಹಕರ ವಾಹನಕ್ಕೆ ಹೊಸ ಬ್ಯಾಟರಿ ಅಳವಡಿಸಿಕೊಡಬೇಕು.. ಒಂದು ವೇಳೆ ಅದನ್ನು ಸರಿಪಡಿಸಿ ಕೊಡದೇ ಇದ್ದರೆ ಗ್ರಾಹಕ ಬ್ಯಾಟರಿಗೆ ಪಾವತಿಸಿದ ₹91 ಸಾವಿರ ಹಣವನ್ನು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಗ್ರಾಹಕನಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ಪ್ರತಿಯಾಗಿ ₹50 ಸಾವಿರ ಪರಿಹಾರ ಹಣ ಮತ್ತು ₹10 ಸಾವಿರ ಪ್ರಕರಣದ ಖರ್ಚು ನೀಡುವಂತೆ ಗ್ರಾಹಕರ ಆಯೋಗ ಸ್ಕೂಟರ್ ಕಂಪನಿಗೆ ಆದೇಶಿಸಿದೆ.


Share It

You cannot copy content of this page