ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರಾಪಿಡೋ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರಾಪಿಡೋ ಕಂಪನಿ ಪರ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಬೈಕ್ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಕಳೆದ ಕೆಲವು ದಿನಗಳಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ಅಗ್ರಿಗೇಟರ್ಸ್ ನಿಲ್ಲಿಸಿದ್ದಾರೆ. ಇದು ಪ್ರಯಾಣಿಕರನ್ನು ಸಂಕಷ್ಟಕ್ಕೆ ತಳ್ಳಿದೆ.
ಪ್ರಯಾಣಿಕರು ಸುಲಭವಾಗಿ ಕಡಿಮೆ ಸಮಯದಲ್ಲಿ ಸಂಚಾರದಟ್ಟಣೆಯ ನಡುವೆ ಶೀಘ್ರ ಪ್ರಯಾಣಕ್ಕೆ ಬೈಕ್ ಟ್ಯಾಕ್ಸಿ ಉತ್ತಮ ಆಯ್ಕೆ ಎಂದು ಪೀಠಕ್ಕೆ ವಿವರಿಸಿದರು. ಸರ್ಕಾರದ ನಿರ್ಣಯದಲ್ಲಿ ಸ್ಪಷ್ಟತೆಯಿಲ್ಲದೆ ಹೋದರೂ ಏಕಸದಸ್ಯ ಪೀಠ ಅರ್ಜಿ ಮಾನ್ಯ ಮಾಡಿದೆ. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಒಡಿಶಾ ಸೇರಿ ವಿವಿಧ ರಾಜ್ಯಗಳು ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿವೆ ಎಂದು ರಾಪಿಡೋ ಪರ ವಕೀಲ ಉದಯ್ ಹೊಳ್ಳ ತಿಳಿಸಿದರು.
ಇನ್ನು ಓಲಾ ಪರ ವಕೀಲರು ವಾದ ಮಂಡಿಸಿ ಬೈಕ್ ಟ್ಯಾಕ್ಸಿ ನಿಷೇಧ ವಿಧಿಸಿದ ನಂತರ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಏಕಸದಸ್ಯ ಪೀಠವು ಪ್ರಕರಣವನ್ನು ತಪ್ಪಾಗಿ ಅರ್ಥೈಸಿಕೊಂಡು ಸರ್ಕಾರ ಹೊರಡಿಸಿದ ಆದೇಶ ಎತ್ತಿಹಿಡಿದಿದೆ ಎಂದರು. ಇದಕ್ಕೆ ರಾಜ್ಯ ಸರ್ಕಾರದ ಪರ ಆಕ್ಷೇಪ ವ್ಯಕ್ತಪಡಿಸಿ ಮೋಟಾರು ವಾಹನ ಕಾಯ್ದೆಯಡಿ ಬೈಕ್ ಮತ್ತು ಟ್ಯಾಕ್ಸಿಗೆ ಅವಕಾಶವಿಲ್ಲ. ಹೀಗಾಗಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದರು. ಆ ಕೂಡಲೇ ಪ್ರತಿಕ್ರಿಯಿಸಿದ ನ್ಯಾಯಪೀಠ ಇದೇ ಕಾಯ್ದೆಯಡಿ ಬೇರೆ ರಾಜ್ಯಗಳು ಅನುಮತಿ ನೀಡಿವೆಯಲ್ಲ? ಸರ್ಕಾರದ ಈ ನಿಲುವು ಬಲವಾಗಿಲ್ಲ, ಸರ್ಕಾರ ಪ್ರಜ್ಞಾಪೂರ್ವಕವಾಗಿ ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿದೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಆ.11 ಕ್ಕೆ ಮುಂದೂಡಿದೆ.