ಬೆಂಗಳೂರು: ರೈಲು ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ದೊರಕಲಿಲ್ಲವೆಂಬ ಕಾರಣಕ್ಕೆ ಆತನ ಕುಟುಂಬ ಸದಸ್ಯರು ಪರಿಹಾರ ಪಡೆಯಲು ಅನರ್ಹರು ಎನ್ನುವಂತಿಲ್ಲ ಎಂದು ಆದೇಶಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
10 ವರ್ಷಗಳ ಹಿಂದೆ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕ ವಾಗಿ ಬಿದ್ದು ಮೃತಪಟ್ಟಿದ್ದ ವಿಜಯಪುರದ ನಿವಾಸಿ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರು. ಪರಿಹಾರ ನೀಡುವಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ ತಮಗೆ ಪರಿಹಾರ ನೀಡಲು ನಿರಾಕರಿಸಿದ್ದ ರೈಲ್ವೇ ಪರಿಹಾರ ಕ್ಲೇಮು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಮೃತನ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿವರ: ಅಮಿನಾಸಾಬ್ 2015ರ ಏ.6ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾಗೆ ತೆರಳಲು ಟಿಕೆಟ್ ಖರೀದಿಸಿ ರೈಲು ಏರಿದ್ದರು. ಆದರೆ, ರೈಲು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲೇ ಅಸುನೀಗಿದ್ದರು. ಇದರಿಂದ ಮೃತನ ಕುಟುಂಬ ಪರಿಹಾರ ನೀಡುವಂತೆ ರೈಲ್ವೆ ಪರಿಹಾರ ಕ್ಲೇಮು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಸಾವನ್ನಪ್ಪಿದ ವ್ಯಕ್ತಿ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ ಎಂದು ಪರಿಹಾರ ನಿರಾಕರಿಸಿ ನ್ಯಾಯಾಧಿಕರಣ ಆದೇಶಿಸಿತ್ತು. ಇದರ ವಿರುದ್ದ ಮೃತನ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು.