ಬಂಧಿತ ವ್ಯಕ್ತಿಗಳಿಗೆ ಠಾಣೆ(ಕಸ್ಟಡಿ)ಯಲ್ಲಿ ಚಿತ್ರಹಿಂಸೆ ನೀಡುವುದನ್ನು ಪೊಲೀಸರ ಅಧಿಕೃತ ಕರ್ತವ್ಯದ ಭಾಗವೆಂದು ಎಂದಿಗೂ ಹೇಳಲಾಗದು ಎಂಬುದಾಗಿ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿರುವ ಕೇರಳ ಹೈಕೋರ್ಟ್ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರೆಸುವಂತೆ ನಿರ್ದೇಶಿಸಿದೆ.
ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಪೊಲೀಸರ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಿಲ್ಲ ಎನ್ನುವ ಕಾರಣಕ್ಕೆ ಅವರು ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ ಅಪರಾಧದಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಸರ್ಕಾರಿ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯ ನಿರ್ವಹಿಸುವಾಗ ಅಪರಾಧ ಎಸಗಿರುವ ಆರೋಪ ಕೇಳಿ ಬಂದರೆ ಆಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ಸಿಆರ್‌ಪಿಸಿ ಸೆಕ್ಷನ್ 197 ರಕ್ಷಿಸುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮುನ್ನ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಅದು ಹೇಳುತ್ತದೆ.
ಚಿತ್ರ ಹಿಂಸೆ ನೀಡುವುದು ಪೊಲೀಸರ ಕರ್ತವ್ಯದ ಅಧಿಕೃತ ಭಾಗ ಎಂದು ಎಂದಿಗೂ ಹೇಳದೆ ಇರುವುದರಿಂದ ಪೊಲೀಸರು ಕಸ್ಟಡಿ ಚಿತ್ರಹಿಂಸೆ ನೀಡುವುದಕ್ಕೆ ಅನುವು ಮಾಡಿಕೊಡಲು ಈ ಸೆಕ್ಷನನ್ನು ಅಸ್ತ್ರವಾಗಿ ಬಳಸುವಂತಿಲ್ಲ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ತಿಳಿಸಿದ್ದಾರೆ.
ಕಸ್ಟಡಿ ಚಿತ್ರಹಿಂಸೆ ಬಹುಶಃ ನಾಗರಿಕ ಸಮಾಜದಲ್ಲಿ ಅತ್ಯಂತ ಕೆಟ್ಟ ಅಪರಾಧಗಳಲ್ಲಿ ಒಂದಾಗಿದ್ದು ಕಾನೂನಾತ್ಮಕ ಆಡಳಿತದಿಂದ ನಿಯಂತ್ರಿತವಾದ ಕ್ರಮಬದ್ಧ ನಾಗರಿಕ ಸಮಾಜಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.ಪೊಲೀಸರ ಇಂತಹ ಅತಿರೇಕದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಧೀಶ ಎಡಪ್ಪಗತ್ ನ್ಯಾಯಾಲಯಗಳಿಗೆ ಸಲಹೆ ನೀಡಿದರು. ಹಾಗೆ ಮಾಡದಿದ್ದರೆ ಅದು ಒಟ್ಟಾರೆ ನ್ಯಾಯ ವಿತರಣಾ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುತ್ತದೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?: ಚಿನ್ನದ ನಾಣ್ಯ ಕದ್ದ ಆರೋಪದ ಮೇಲೆ ಮನೆಗೆಲಸದಾಕೆ ಸುಧಾ ಎಂಬುವವರಿಗೆ ಪೊಲೀಸರು ಮೂರು ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿ ಚಿತ್ರಹಿಂಸೆ ನೀಡಿದ್ದರು. ಕಡೆಗೆ ನಾಣ್ಯಗಳು ಮಾಲೀಕರ ಮನೆಯಲ್ಲೇ ಇರುವುದು ಪತ್ತೆಯಾಗಿತ್ತು. ಚಿತ್ರಹಿಂಸೆ ನೀಡಿದ ಘಟನೆಯನ್ನು ಯಾರಿಗೂ ವಿವರಿಸದಂತೆ ಎಚ್ಚರಿಕೆ ನೀಡಿ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿದ್ದರು.
ಇದನ್ನು ಪ್ರಶ್ನಿಸಿ ಸುಧಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೇಲ್ಮಾತಿಗೆ ಸೇರಿದ್ದ ಮನೆ ಮಾಲೀಕರ ವಿರುದ್ಧ ಆಕೆ ಎಸ್‌ಸಿ ಎಸ್‌ಟಿ ಕಾಯದೆಯಡಿಯಲ್ಲಿಯೂ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ ಆಕೆಯ ಪರವಾಗಿ ತೀರ್ಪು ನೀಡಿತ್ತು. ಆದರೆ ಆರೋಪ ಸಾಬೀತಾಗಿಲ್ಲ ಎಂದು ತಿಳಿಸಿ ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಧಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಘಟನೆಯ ದಿನ ಪೊಲೀಸ್ ಠಾಣೆಯಿಂದ ಹೊರಬಿದ್ದ ಸುಧಾ ಅವರ ದೇಹದ ಮೇಲೆ ತೀವ್ರ ಗಾಯಗಳಾಗಿದ್ದನ್ನು ವೈದ್ಯಕೀಯ ದಾಖಲೆಗಳ ಮೂಲಕ ತಿಳಿದ ಹೈಕೋರ್ಟ್ ಚಿತ್ರಹಿಂಸೆ ಪೊಲೀಸರ ಅಧಿಕೃತ ಕರ್ತವ್ಯದ ಭಾಗ ಎಂದು ಸಮರ್ಥಿಸಲಾಗದು.ಆದ್ದರಿಂದ ಪೊಲೀಸ್ ಅಧಿಕಾರಿಗಳನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗಳಿಸಿ ಅವರ ವಿರುದ್ಧ ಆರೋಪ ನಿಗದಿಪಡಿಸಿ ವಿಚಾರಣೆ ಮುಂದುವರೆಸುವಂತೆ ನಿರ್ದೇಶಿಸಿತು.