ಸುದ್ದಿ

ಮರ್ಯಾದೆಗೇಡು ಹತ್ಯೆ; ಮಗಳನ್ನು ಕೊಲೆ ಮಾಡಿದ ತಂದೆ ಅರೆಸ್ಟ್

Share It

ಕಲಬುರಗಿ: ಅನ್ಯಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವತಿ ಕವಿತಾ ಕೊಳ್ಳುರ (18) ಹತ್ಯೆಯಾಗಿದ್ದು ಯುವತಿಯ ತಂದೆ ಶಂಕರ ಕೊಳ್ಳುರ ಎಂಬಾತನನ್ನು ಮರ್ಯಾದೆಗೇಡು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಲಿಂಗಾಯತ ಸಮುದಾಯದ ಯುವತಿಯು ಗ್ರಾಮದ ಕುರುಬ ಜಾತಿಯ ಆಟೊ ಚಾಲಕನ ಪ್ರೀತಿಸುತ್ತಿದ್ದಳು. ಆ ಯುವಕನನ್ನೇ ಮದುವೆ ಆಗುವೆ. ಇಲ್ಲ ಮನೆ ಬಿಟ್ಟು ಹೋಗುವೆ ಎಂದು ಪಟ್ಟು ಹಿಡಿದದ್ದಳು ಎಂದು ತಿಳಿದುಬಂದಿದ್ದು, ಈ ಕುರಿತು ಆ.27ರಂದು ಯುವತಿ ಹಾಗೂ ಕುಟುಂಬದ ನಡುವೆ ಮತ್ತೆ ಗಲಾಟೆ ನಡೆದಿತ್ತು. ಮಗಳು ಅನ್ಯಜಾತಿ ಯುವಕನ ಜೊತೆ ಹೋದರೆ, ಮರ್ಯಾದೆ ಹೋಗುತ್ತದೆ ಎಂದುಕೊಂಡು ತಂದೆ ಹಾಗೂ ಇತರ ಇಬ್ಬರು ಸೇರಿಕೊಂಡು ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಯುವತಿ ಬಾಯಲ್ಲಿ ಕ್ರಿಮಿನಾಶಕ ಹಾಕಿದ್ದಾರೆ. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿಸಿ, ಆಗಸ್ಟ್ 28ರಂದು ಬೆಳಿಗ್ಗೆ 9 ಗಂಟೆ ಹೊತ್ತಿಗೆ ಶವವನ್ನು ಸುಟ್ಟು ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಯುವತಿಯ ತಂದೆಯನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ನೆರವಾದ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ನಗರ ಪೊಲೀಸ್ ಕಮಿಷನ‌ರ್ ಶರಣಪ್ಪ ಎಸ್‌.ಡಿ. ತಿಳಿಸಿದ್ದಾರೆ. ಫರಹತಾಬಾದ್ ಠಾಣೆ ಪೊಲೀಸರು ಈ ಕುರಿತು ಮೂವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


Share It

You cannot copy content of this page